ಚಿತ್ರದುರ್ಗ: ಜಮೀನಿನ ಪರಿಹಾರ ಧನ ನೀಡಲು ಭೂಸ್ವಾಧೀನ ಅಧಿಕಾರಿಗಳು ಸುಮಾರು 9 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂದರ್ಭದಲ್ಲಿ ಅದಕ್ಕೆ ಒಪ್ಪದಿದ್ದ ಮಹಿಳೆ ಬಳಿಕ 6 ಲಕ್ಷ ರೂ. ಹಣ ನೀಡಲು ಮುಂದಾಗಿದ್ದಾರೆ. ಈ ವೇಳೆ, ರೆಡ್ ಹ್ಯಾಂಡ್ ಆಗಿ ಎಸಿಬಿ ಅಧಿಕಾರಿಗಳ ಕೈಗೆ ಭೂಸ್ವಾಧೀನ ಅಧಿಕಾರಿಗಳು ಸಿಕ್ಕಿಬಿದ್ದ ಘಟನೆ ಹಿರಿಯೂರು ನಗರದಲ್ಲಿ ನಡೆದಿದೆ.
ಹಿರಿಯೂರು ಪಟ್ಟಣದ ಚಳ್ಳಕೆರೆ ರಸ್ತೆಯಲ್ಲಿರುವ ಎಸ್ಎಲ್ಒ ಕಚೇರಿಯಲ್ಲಿ ಮಹಿಳೆಯೊಬ್ಬರಿಂದ 6 ಲಕ್ಷ ಲಂಚ ಸ್ವೀಕರಿಸುವಾಗ ಎಸಿಬಿ ದಾಳಿ ನಡೆಸಿದೆ. ಈ ವೇಳೆ, ಹಣದ ಜೊತೆಗೆ ರಾಷ್ಟ್ರೀಯ ಹೆದ್ದಾರಿ 150A ವಿಶೇಷ ಭೂಸ್ವಾಧೀನ ಅಧಿಕಾರಿ ವೀರೇಶ್ ಕುಮಾರ್, ಮ್ಯಾನೇಜರ್ ಮೋಹನ್ ಕುಮಾರ್ ಹಾಗೂ ಕಾರು ಚಾಲಕ ಮನ್ಸೂರ್ನನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಮಹಿಳೆಯ ದೂರಿನ ಆಧಾರದ ಮೇಲೆ ನಿನ್ನೆ ಸಂಜೆ 7.30ರ ಸುಮಾರಿಗೆ ಎಸಿಬಿ ಅಧಿಕಾರಿಗಳಾದ ಬಸವರಾಜ್ ಆರ್. ಮಗದುಮ್, ಪೊಲೀಸ್ ನಿರೀಕ್ಷಕ ಪ್ರವೀಣ್ ಕುಮಾರ್, ಹಸನ್ ಸಾಬ್ ಹಾಗೂ ಸಿಬ್ಬಂದಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಬೀದರ್ನಿಂದ ಹಿರಿಯೂರು ಮೂಲಕ ಶ್ರೀರಂಗಪಟ್ಟಣಕ್ಕೆ ಹಾದು ಹೋಗುವ NH -150ಎ ರಸ್ತೆ ಕಾಮಗಾರಿಗೆ ಮಹಿಳೆಯ ಜಮೀನು ಸ್ವಾಧೀನ ಆಗಿತ್ತು. ಪರಿಹಾರ ಹಣ ನೀಡುವುದಕ್ಕೆ 9 ಲಕ್ಷ ಲಂಚ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳಿಗೆ ದೂರಿನ ಅನ್ವಯ ಹಣ ನೀಡುವಾಗ ಸ್ಥಳಕ್ಕೆ ಭೇಟಿ ನೀಡಿ ದಾಳಿ ಮಾಡಿ ಪರೀಶಿಲನೆ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.