ಚಿತ್ರದುರ್ಗ: ರಾಜಕೀಯ ಎಲ್ಲರಿಗೂ ಸುಲಭ ಒಲಿಯಲ್ಲ. ಆದರೆ, ತಮ್ಮ 88ನೇ ಇಳಿವಯಸ್ಸಿನಲ್ಲಿ ದಾಕ್ಷಾಯಿಣಿಯಮ್ಮ ಎಂಬುವರು ಪ್ರಥಮ ಬಾರಿಗೆ ಚುನಾವಣೆಗೆ ಸ್ಪರ್ಧಿಸಿ ಗೆದ್ದಿರೋದಲ್ಲದೇ ಗ್ರಾಪಂ ಚುಕ್ಕಾಣಿ ಹಿಡಿಯೋ ಮೂಲಕ ರಾಜ್ಯದಲ್ಲಿಯೇ ಗಮನ ಸೆಳೆದಿದ್ದಾರೆ.
ಹೊಳಲ್ಕೆರೆ ತಾಲೂಕಿನ ಚಿಕ್ಕಎಮ್ಮಿಗನೂರು ಗ್ರಾಪಂ ಚುನಾವಣೆಗೆ 88ರ ವೃದ್ದೆ ದಾಕ್ಷಾಯಿಣಿಯಮ್ಮ ಪ್ರಥಮ ಬಾರಿಗೆ ಕೊಡಗವಳ್ಳಿ ಗ್ರಾಮದಿಂದ ಸ್ಪರ್ಧಿಸಿದ್ದರು. ಗ್ರಾಮಸ್ಥರ ವಿಶ್ವಾಸ ಪಡೆದು ಭರ್ಜರಿಯಾಗಿ ಗೆಲುವು ಸಾಧಿಸಿ, ಬಳಿಕ ಮೊನ್ನೆ ಫೆ.12ರಂದು ಚಿಕ್ಕಎಮ್ಮಿಗನೂರು ಗ್ರಾಪಂ ಅಧ್ಯಕ್ಷೆಯಾಗಿ ಆಯ್ಕೆಯಾಗುವ ಮೂಲಕ ರಾಜ್ಯದಲ್ಲಿ ಅತ್ಯಂತ ಹಿರಿಯ ವಯಸ್ಸಿನ ಅಧ್ಯಕ್ಷೆ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಚಿಕ್ಕಎಮ್ಮಿಗನೂರು ಗ್ರಾಪಂಗೆ ಹೊಸಳ್ಳಿ, ಐನಳ್ಳಿ, ಚಿಕ್ಕನಕಟ್ಟೆ, ಕೊಡಗವಳ್ಳಿ ಸೇರಿ ಒಟ್ಟು 7 ಗ್ರಾಮ ಒಳಪಡುತ್ತವೆ. 17 ಸದಸ್ಯರು ಆಯ್ಕೆಯಾಗುತ್ತಾರೆ. ಅಧ್ಯಕ್ಷ ಚುನಾವಣೆಯಲ್ಲಿ ವೃದ್ದೆ ದಾಕ್ಷಾಯಿಣಿಯಮ್ಮ ಪ್ರತಿಸ್ಪರ್ಧೆ ವಿರುದ್ಧ 11 ಮತಗಳ ಪಡೆಯುವ ಮೂಲಕ ಜನರು ಹುಬ್ಬೇರಿಸುವಂತೆ ಮಾಡಿದ್ದಾರೆ.
ವಿಶೇಷವೆಂದರೆ ತಮ್ಮ ಜೀವನದಲ್ಲಿ ಪ್ರಥಮ ಬಾರಿಗೆ ರಾಜಕೀಯ ಪ್ರವೇಶಿಸಿ, ಮೊದಲ ಪ್ರಯತ್ನದಲ್ಲೇ ವಿಜಯಶಾಲಿಯಾಗಿ, ಸಾಮಾನ್ಯ ಕೆಟಗರಿಯಲ್ಲಿ ಅಧ್ಯಕ್ಷೆಯಾಗುವ ಅದೃಷ್ಟ ದಾಕ್ಷಾಯಿಣಿಯಮ್ಮ ಅವರಿಗೆ ಸಿಕ್ಕಿದೆ.
ಉತ್ಸಾಹದಿಂದ ಸಮಾಜಮುಖಿ ಕಾರ್ಯದಲ್ಲಿ ಭಾಗಿಯಾದ ಅಜ್ಜಿ: ಕಳೆದ ವಾರ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ, ದಾಕ್ಷಾಯಿಣಿಯಮ್ಮ ತಮ್ಮ ವ್ಯಾಪ್ತಿಯ ಹಳ್ಳಿಗಳಿಗೆ ಸಂಚರಿಸಿ ಜನರ ಕಷ್ಟಗಳನ್ನ ಆಲಿಸುತ್ತಿದ್ದಾರೆ.
ಕುಡಿಯುವ ನೀರು, ಸ್ವಚ್ಛತೆ, ರಸ್ತೆ ಅಭಿವೃದ್ಧಿ, ನರೇಗಾ ಯೋಜನೆ ಅಡಿಯಲ್ಲಿ ಉದ್ಯೋಗ ಒದಗಿಸುವುದು, ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಕಲಿಕಾ ಪ್ರಗತಿ ಪರಿಶೀಲನೆ, ಮೂಲಸೌಕರ್ಯಗಳನ್ನು ಒದಗಿಸುವ ಭರವಸೆ ನೀಡುತ್ತಿದ್ದಾರೆ.
ಎಲ್ಲ ಕೆಲಸಗಳಲ್ಲಿ ಇನ್ನುಳಿದ ಸದಸ್ಯರ ವಿಶ್ವಾಸಗಳಿಸಿ, ಜೊತೆ ಸೇರಿಸಿಕೊಂಡು ಅಭಿವೃದ್ಧಿ ಕೆಲಸದಲ್ಲಿ ದ್ರಾಕ್ಷಾಯಿಣಿಯಮ್ಮ ತೊಡಗಿರುವುದು ಸುತ್ತಮುತ್ತಲಿನ ಗ್ರಾಮಸ್ಥರ ಮೆಚ್ಚುಗೆಗೆ ಕಾರಣವಾಗಿದೆ.
ಅಜ್ಜಿ ಸರಳವಾಗಿ ಇಂಗ್ಲಿಷ್ ಮಾತನಾಡಬಲ್ಲರು : ತಮ್ಮ ಗ್ರಾಪಂ ವ್ಯಾಪ್ತಿಗೆ ಒಳಪಡುವ ಕಾಮಗಾರಿಗಳ ದಾಖಲಾತಿಗಳನ್ನ ದಾಕ್ಷಾಯಿಣಿಯಮ್ಮ ಪರಿಶೀಲನೆ ನಡೆಸುತ್ತಿರುವುದನ್ನ ನೋಡಿದ ಸಿಬ್ಬಂದಿ ಶಾಕ್ ಆಗಿದ್ದಾರೆ. ಆಶ್ಚರ್ಯವೆಂದರೆ, ಈ ವೃದ್ಧೆ ಸರಳವಾಗಿ ಇಂಗ್ಲಿಷ್ ಮಾತನಾಡುತ್ತಾರೆ. ಬರವಣಿಗೆ, ಓದು ಎಲ್ಲದರಲ್ಲೂ ಸೈ ಎನಿಸಿದ್ದಾರೆ.
ಅಜ್ಜಿಯ ಸಮಾಜಿಕ ಕಾಳಜಿ ಹಾಗೂ ಬುದ್ಧಿಶಕ್ತಿ ನೋಡಿದ ಅಧಿಕಾರಿಗಳು ಹಾಗೂ ಸದಸ್ಯರು ಒಂದು ಕ್ಷಣ ದಂಗಾಗಿದ್ದಾರೆ. ಗ್ರಾಪಂಗೆ ಆಗಮಿಸಿ ಸದಸ್ಯರುಗಳಿಂದ ಮುಂದಾಗಬೇಕಾದ ಅಭಿವೃದ್ಧಿ ಕೆಲಸಗಳ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಈಗಾಗಲೇ ಚಾಲ್ತಿಯಲ್ಲಿರುವ ಅಧಿಕಾರಿಗಳಿಂದ ಕಡತಗಳನ್ನ ಪಡೆದು ಪರಿಶೀಲಿಸುತ್ತಿದ್ದಾರೆ.
ಸದಸ್ಯರೊಂದಿದೆ 7 ಗ್ರಾಮಗಳಲ್ಲಿ ಹರೆಯದವರಂತೆ ಓಡಾಟ ನಡೆಸಿ ಅಭಿವೃದ್ಧಿ ಕೆಲಸಗಳ ಕಡೆಗೆ ಗಮನ ಹರಿಸುತ್ತಿದ್ದಾರೆ. ನೂತನ ಅಧ್ಯಕ್ಷರ ಈ ನಡೆ ಕಂಡು ಆ ಎಲ್ಲಾ ಗ್ರಾಮಗಳ ಜನತೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.
ತಮ್ಮ ವ್ಯಾಪ್ತಿಗೆ ಒಳಪಡುವ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ರಕ್ಷಣಾ ಪಣತೊಟ್ಟು ಯುವಕರಂತೆ ಕೆಲಸ ಮಾಡುತ್ತಿದ್ದಾರೆ. ಸೋಮಾರಿತನಕ್ಕೆ ಶರಣಾಗುವ ಎಷ್ಟೋ ಯುವ ಸಮೂಹದ ಮಧ್ಯೆ ಗ್ರಾಪಂ ಅಧ್ಯಕ್ಷೆ ದಾಕ್ಷಾಯಿಣಿಯಮ್ಮ ಸಮಾಜಮುಖಿ ಕಾರ್ಯಗಳ ಮೂಲಕ ಇನ್ನಷ್ಟು ಮಾದರಿಯಾಗಲಿ.