ಚಿತ್ರದುರ್ಗ : ಸರ್ಕಾರದ ಆದೇಶದಂತೆ ಈಗಾಗಲೇ ರಾಜ್ಯದಲ್ಲಿ ಕಾಲೇಜುಗಳನ್ನು ಆರಂಭಿಸಲಾಗಿದ್ದು, ತರಗತಿಗಳಿಗೆ ಆಗಮಿಸುವ ವಿದ್ಯಾರ್ಥಿಗಳಿಗೆ ಕೊರೊನಾ ಪರೀಕ್ಷೆಯ ವರದಿ ಕಡ್ಡಾಯ ಮಾಡಲಾಗಿದೆ. ಪರಿಣಾಮ ಸಾಕಷ್ಟು ವಿದ್ಯಾರ್ಥಿಗಳಿಗೆ ಕೊರೊನಾ ದೃಢವಾಗಿದ್ದು ಆತಂಕಕ್ಕೆ ಕಾರಣವಾಗಿದೆ.
ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ವಿದ್ಯಾರ್ಥಿಗಳು ಕೊರೊನಾ ಪರೀಕ್ಷೆಗೊಳಗಾದರು. ಈಗಾಗಲೇ ನವೆಂಬರ್ 17ರಿಂದ ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಕಾಲೇಜಿನ ಸಿಬ್ಬಂದಿಗೆ ಕೊರೊನಾ ಪರೀಕ್ಷೆ ಮಾಡಲಾಗುತ್ತಿದ್ದು, ಇಲ್ಲಿಯತನಕ 1265 ಜನರನ್ನು ಪರೀಕ್ಷೆ ಮಾಡಲಾಗಿದೆ.
1265 ಜನರ ಪೈಕಿ 17 ಜನ ವಿದ್ಯಾರ್ಥಿಗಳಿಗೆ ಕೊರೊನಾ ವರದಿ ಪಾಸಿಟಿವ್ ಬಂದಿರುವುದರಿಂದ ಇತರೆ ವಿದ್ಯಾರ್ಥಿಗಳು ಆತಂಕದಲ್ಲೇ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಉಳಿದ ಕಾಲೇಜಿನ ಸಿಬ್ಬಂದಿ ವರದಿ ನೆಗೆಟಿವ್ ಬಂದಿದೆ. ಪಾಸಿಟಿವ್ ಬಂದಿರುವ 17 ಜನ ವಿದ್ಯಾರ್ಥಿಗಳನ್ನು ಈಗಾಗಲೇ ಕೋವಿಡ್ ಆಸ್ಪತ್ರೆಗೆ ರವಾನಿಸಲಾಗಿದೆ.
ಈ ನಡುವೆ ಕೊರೊನಾ ಪರೀಕ್ಷೆಯನ್ನು ಆಯಾ ಕಾಲೇಜಿನ ಆವರಣದಲ್ಲೇ ಮಾಡಬೇಕು ಎಂದು ಪೋಷಕರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ನಗರದಲ್ಲಿರುವ ಸರ್ಕಾರಿ ವಿಜ್ಞಾನ ಕಾಲೇಜು ಹಾಗೂ ಬಾಲಕಿಯರ ಕಲಾ ಪದವಿ ಕಾಲೇಜುಗಳನ್ನು ಮುಂಜಾಗ್ರತಾ ಕ್ರಮಗಳನ್ನು ವಹಿಸುವ ಮುಖೇನ ಸಿದ್ಧತೆ ನಡೆಸಿ ಆರಂಭಿಸಲಾಗಿದೆ.
ಆದರೆ, ಕೊರೊನಾ ಪರೀಕ್ಷಾ ವರದಿ ಹಿಡಿದು ಕಾಲೇಜುಗಳಿಗೆ ಆಗಮಿಸಲು ಹೇಳಿರುವುದು ವಿದ್ಯಾರ್ಥಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಆತಂಕದಲ್ಲೇ ಜಿಲ್ಲಾಸ್ಪತ್ರೆಗೆ ಆಗಮಿಸುತ್ತಿರುವ ವಿದ್ಯಾರ್ಥಿಗಳು ಸಾಲಿನಲ್ಲಿ ನಿಂತು ಕೊರೊನಾ ಪರೀಕ್ಷೆಗೊಳಗಾಗಿದ್ದಾರೆ.