ಚಿತ್ರದುರ್ಗ: ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಮಾತನ್ನು ಸಾರ್ಥಕಗೊಳಿಸಿದ್ದಾನೆ ಈ ಪುಟ್ಟ ಬಾಲಕ. ಹೌದು, 13 ವರ್ಷದ ಈ ಬಾಲಕ ತನ್ನ ಕಣ್ಣಿಗೆ ಬಟ್ಟೆ ಕಟ್ಟಿ ಹಾರ್ಮೋನಿಯಂ ನುಡಿಸಲು ನಿಂತ್ರೆ ಇತರರನ್ನು ಸಂಗೀತ ಲೋಕಕ್ಕೆ ಕರೆದೊಯ್ಯುತ್ತಾನೆ. ಬಾಲಕನ ಪ್ರತಿಭೆಗೆ ಹೆಚ್ಚಿನವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಈ ಪೋರನಿಗೆ ಸಾಲು-ಸಾಲು ಪ್ರಶಸ್ತಿಗಳು ಬಂದಿವೆ.
ಜಿಲ್ಲೆಯ ಹಿರಿಯೂರು ನಗರದ ಆರ್ಶೀತ್, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕನ್ನಡ ಹಾಡುಗಳಿಗೆ ಹಾರ್ಮೋನಿಯಂ ಮೂಲಕ ವಾದ್ಯ ನುಡಿಸುತ್ತಾನೆ. ಕೀ ಬೋರ್ಡ್ ಮೇಲೆ ಕೈ ಹಾಕಿ ತಾಳಕ್ಕೆ ತಕ್ಕಂತೆ ಸ್ವರ ನುಡಿಸೋ ಈತನ ಕಲೆಗೆ ಬೆನ್ನೆಲುಬಾಗಿ ತಂದೆ - ತಾಯಿ ನಿಂತಿದ್ದಾರೆ. ಕನ್ನಡದ ಯಾವುದೇ ಹಾಡು ಬಾಲಕನ ಕಿವಿ ತಾಗಿದ್ರು, ಕಣ್ಣು ಮುಚ್ಚಿಯೇ ಹಾರ್ಮೋನಿಯಂ ಕೀ ಬೋರ್ಡ್ ಹಿಡಿದು ವಾದ್ಯ ನುಡಿಸುತ್ತಾನೆ.
ಈ ಸುದ್ದಿಯನ್ನೂ ಓದಿ: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಡಿಸ್ಚಾರ್ಜ್: ಆಸ್ಪತ್ರೆ ಬಳಿ ದಾದಾ ಮಾತು! ವಿಡಿಯೋ
ಬಾಲಕನ ಕಲೆಗೆ ಲಭಿಸಿದೆ ದೇಶಿ-ವಿದೇಶಿ ಪ್ರಶಸ್ತಿಗಳು:
ಕಳೆದ ನಾಲ್ಕು ತಿಂಗಳಿನಿಂದ ರವಿಶಂಕರ ಎಂಬುವವರ ಬಳಿ ಕೀಬೋರ್ಡ್ ವಾದನ ಕಲೆ ಅಭ್ಯಾಸ ಮಾಡುತ್ತಿರುವ ಈ 13ರ ಪೋರ ಸಂಗೀತ ಕ್ಷೇತ್ರದಲ್ಲಿ ವಿಭಿನ್ನ ಸಾಧನೆ ಮಾಡುವ ತವಕದಲ್ಲಿದ್ದಾನೆ. ಆರ್ಶೀತ್ ಕಣ್ಣಿಗೆ ಬಟ್ಟೆ ಕಟ್ಟಿ ನಿರಂತರವಾಗಿ 44 ನಿಮಿಷಗಳ ವಿವಿಧ ಹಾಡುಗಳಿಗೆ ಹಾರ್ಮೋನಿಯಂ ನುಡಿಸಿದ ಕಾರಣ ಇಂಡಿಯಾ ಬುಕ್ ಆಫ್ ರೆಕಾರ್ಡ್ ಈತನ ಪ್ರತಿಭೆ ಗುರುತಿಸಿ ಪ್ರಶಸ್ತಿ ನೀಡಿದೆ. ಅಲ್ಲದೇ ಗಿನ್ನಿಸ್ ದಾಖಲೆ ಕೂಡ ಈ ಬಾಲಕನಿಗೆ ಒಲಿದು ಬಂದಿದೆ. ಸಂಸ್ಕೃತ ಮಂತ್ರ ಗೀತೆ ಪಠಣ ಮಾಡುತ್ತಾ ರುಬಿಕ್ ಅನ್ನು ತಟ್ಟಂತ ಜೋಡಿಸೋ ಕಲೆ ಮೈಗೂಡಿಸಿಕೊಂಡಿದ್ದಾನೆ. ಬಾಲಕನ ಕಲೆಯನ್ನು ನೋಡಿ ಅನೇಕ ಸಂಘ ಸಂಸ್ಥೆಗಳು ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಿವೆ.