ಚಿತ್ರದುರ್ಗ : ಬಡವರಿಗೆ ಉಪಯೋಗವಾಗಲೆಂದು ಒದಗಿಸಲಾದ 108 ಆರೋಗ್ಯ ಕವಚಗಳು ಇದೀಗ ಸರಿಯಾದ ನಿರ್ವಹಣೆ ಇಲ್ಲದೆ ಗುಜರಿ ಸೇರಿವೆ. ಬಡ ರೋಗಿಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುವ 13 ಆ್ಯಂಬುಲೆನ್ಸ್ ಗಳನ್ನು ಗುಜುರಿ ಲೆಕ್ಕಕ್ಕೆ ತೂಕ ಹಾಕಲು ಚಿತ್ರದುರ್ಗ ಜಿಲ್ಲಾ ಆರೋಗ್ಯ ಇಲಾಖೆ ಸಿದ್ದತೆ ಮಾಡಿಕೊಂಡಿದೆ.
ಚಿಕ್ಕ ಪುಟ್ಟ ದೋಷಗಳಿಂದ ಮೂಲೆ ಸೇರಿರುವ ಆ್ಯಂಬುಲೆನ್ಸ್ ಗಳಿಂದ ಚಾಲಕರು ದೂರ ಉಳಿದಿದ್ದು, ಹಳೇ ಆರೋಗ್ಯ ಕವಚಗಳು ಅನಾಥವಾಗಿ ಗುಜುರಿ ಸೇರುವುದು ಕೂಡ ಖಚಿತವಾಗಿದೆಯಂತೆ.ಈ ಹಿಂದೆ ಅದರ ನಿರ್ವಹಣೆ ಹೊತ್ತಿದ್ದ ಜಿವಿಕೆ ಖಾಸಗಿ ಸಂಸ್ಥೆಯ ಕಳಪೆ ನಿರ್ವಹಣೆಯಿಂದಾಗಿ ಕೇವಲ ಹತ್ತು ವರ್ಷಗಳಲ್ಲೇ ಆಂಬ್ಯುಲೆನ್ಸ್ ವಾಹನಗಳು ಕೆಟ್ಟು ನಿಂತಿವೆ. ಕೆಲವು ಆಂಬುಲೆನ್ಸ್ಗಳು ಕಿಡಿಗೇಡಿಗಳಿಂದ ಬೆಂಕಿಗಾಹುತಿಯಾಗಿವೆ. ಇನ್ನೂ ಕೆಲವು ಆ್ಯಂಬುಲೆನ್ಸ್ ಸುಸ್ಥಿತಿಯಲ್ಲಿದ್ದರೂ ಅವುಗಳನ್ನ ಉಪಯೋಗಿಸದೇ, ಖಾಸಗಿ ಆ್ಯಂಬುಲೆನ್ಸ್ಗಳಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ.
ಚಿತ್ರದುರ್ಗ ಜಿಲ್ಲಾಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆ ನೆಪವೊಡ್ಡಿ ದಾವಣಗೆರೆ ಆಸ್ಪತ್ರೆಗೆ ಸಾಗಿ ಹಾಕುವ ಕೆಲಸ ನಿರಂತರವಾಗಿದ್ದು, ಖಾಸಗಿ ಅಂಬ್ಯುಲೆನ್ಸ್ ಮಾಲಿಕರು ಬಡ ರೋಗಿಗಳನ್ನ ಸುಲಿಗೆ ಮಾಡುತ್ತಿರುವ ಆರೋಪಗಳು ಕೇಳಿ ಬರುತ್ತಿವೆ. ಹೀಗಾಗಿ ಅಲ್ಪ ಸ್ವಲ್ಪ ತೊಂದರೆ ಆಗಿರುವ ಆಂಬ್ಯಲೆನ್ಸ್ಗಳನ್ನ ರಿಪೇರಿ ಮಾಡಿಸಿದ್ರೆ ಜಿಲ್ಲೆಯ ಬಡ ರೋಗಿಗಳಿಗೆ ಅನುಕೂಲ ಆಗುತ್ತದೆ ಎಂದು ಸಾರ್ವಜನಿಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.