ಚಿಕ್ಕಮಗಳೂರು: ಜಿಲ್ಲೆಯ ಎನ್.ಆರ್.ಪುರ ತಾಲೂಕು ಹಳೇಪೇಟೆ ಪಟ್ಟಣದಲ್ಲಿ ಕಣ್ಮರೆಯಾಗಿದ್ದ ಯುವಕ ಶವವಾಗಿ ಪತ್ತೆಯಾಗಿದ್ದಾನೆ.
ಎನ್.ಆರ್.ಪುರ ಪಟ್ಟಣದ ಹಳೇಪೇಟೆ ನಿವಾಸಿ ಗಿರೀಶ್ (35) ಕಳೆದ ಎರಡು ದಿನಗಳ ಹಿಂದೆ ಮನೆಗೆ ಬಾರದೇ ಕಣ್ಮರೆಯಾಗಿದ್ದ. ಗಿರೀಶ್ ಮನೆಗೆ ಬಾರದಿರುವುದನ್ನು ಕಂಡು ಆತನ ಅಕ್ಕ ಇಂದ್ರಾ ಪೋಲಿಸರಿಗೆ ಈ ಬಗ್ಗೆ ದೂರು ನೀಡಿದ್ದರು. ಆದರೆ, ಇದೀಗ ಹಳೇಪೇಟೆ ಪಕ್ಕದಲ್ಲಿರುವ ಕೆರೆಯಲ್ಲಿ ಗಿರೀಶ್ ಮೃತ ದೇಹ ಪತ್ತೆಯಾಗಿದೆ.
ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಯೊಬ್ಬಳು ಕೆರೆಯಲ್ಲಿ ವ್ಯಕ್ತಿಯ ತಲೆ ತೇಲುತ್ತಿರುವುದನ್ನು ಕಂಡು ಕೂಡಲೇ ಪೊಲೀಸ್ ಠಾಣೆಗೆ ಸುದ್ದಿ ಮುಟ್ಟಿಸಿದ್ದಾಳೆ. ಸ್ಥಳಕ್ಕೆ ಆಗಮಿಸಿದ ಪೋಲಿಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಶವವನ್ನು ಹೊರ ತೆಗೆದಾಗ ಅದು ಗಿರೀಶ್ ಶವ ಎಂದು ಗೊತ್ತಾಗಿದೆ. ಗೊಬ್ಬರ ತುಂಬುವ ಕೆಲಸ ಮಾಡುತ್ತಿದ್ದ್ದ ಗಿರೀಶ್, ವಿಪರೀತ ಮಧ್ಯಪಾನ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಮಧ್ಯಪಾನ ಮಾಡಿಕೊಂಡು ಮನೆಗೆ ಬರುವ ವೇಳೆ ಆಕಸ್ಮಿಕವಾಗಿ ಕೆರೆಯಲ್ಲಿ ಬಿದ್ದು ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಕೆರೆಯ ಸುತ್ತ ಮುತ್ತ ಯಾವುದೇ ರೀತಿಯ ತಡೆಗೊಡೆ ಇಲ್ಲದಿರುವುದೆ ಈ ಅವಘಡಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಎನ್.ಆರ್.ಪುರ ಪೋಲಿಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆಸಿದ್ದಾರೆ.