ಚಿಕ್ಕಮಗಳೂರು: ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟಿವ್ ಆಗಿದ್ದ ಯುವತಿವೋರ್ವಳು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಕಲ್ಯಾಣ ನಗರದ ನಿವಾಸಿಯಾಗಿದ್ದ ಸಿಂಧು (19) ಎಂಬ ಯುವತಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣಳಾಗಿ ಮನೆಯಲ್ಲೇ ಉಳಿದಿದ್ದಳು. ಆದರೆ ಸದಾ ಚಟುವಟಿಕೆಯಿಂದ ಆಕೆ ತನ್ನ ಡ್ಯಾನ್ಸ್ ವಿಡಿಯೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಿದ್ದಳು. ಆದರೆ ಆಕೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ. ಆಕೆ ಸೋಶಿಯಲ್ ಮೀಡಿಯಾದಲ್ಲಿ "ತನ್ನ ತಲೆಗೆ ಪೆಟ್ಟು ಬಿದ್ದಿದ್ದು, ನಾನು ಸಂಕಷ್ಟದಲ್ಲಿ ಇದ್ದೀನಿ" ಎಂದು ತಲೆ, ಕಿವಿಯಿಂದ ರಕ್ತ ಸೋರುತ್ತಿರುವ ಫೋಟೋಗಳನ್ನ ಶೇರ್ ಮಾಡಿದ್ದಳು ಎಂದು ತಿಳಿದುಬಂದಿದೆ.
ಆಕೆಯ ಮೃತದೇಹವನ್ನ ಚಿಕ್ಕಮಗಳೂರು ಆಸ್ಪತ್ರೆಗೆ ತಂದಿದ್ದ ಪೋಷಕರು, ಬಳಿಕ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ಮಗಳು ಮನೆಯಲ್ಲಿ ನೇಣು ಹಾಕಿಕೊಂಡಿದ್ದಾಳೆ ಎಂದು ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದಾರೆ. ಆದರೆ ಘಟನೆಗೂ ಮುನ್ನ ಆಕೆ ರಕ್ತಸಿಕ್ತ ಫೋಟೋಗಳನ್ನು ಶೇರ್ ಮಾಡಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎನ್ನಲಾಗ್ತಿದೆ.
ಸದ್ಯ ಚಿಕ್ಕಮಗಳೂರು ನಗರ ಪೊಲೀಸರು ಆತ್ಮಹತ್ಯೆ ಎಂದು ಪ್ರಕರಣ ದಾಖಲಿಸಿದ್ದಾರೆ. ಆದರೆ ಆತ್ಮಹತ್ಯೆಗೂ ಮುನ್ನ ಯುವತಿ ತಲೆಗೆ ಆಗಿರುವ ಗಾಯ ಏನು ಎಂಬುದು ಮಾತ್ರ ಇನ್ನೂ ನಿಗೂಢವಾಗಿದೆ.