ಚಿಕ್ಕಮಗಳೂರು: ಮಳೆಯ ಆರ್ಭಟಕ್ಕೆ ಮಲೆನಾಡು ತತ್ತರಿಸಿದೆ. ಕಾಫಿನಾಡಿನಲ್ಲೂ ಹಲವೆಡೆ ವರುಣ ಅವಾಂತರ ಸೃಷ್ಟಿಸಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆರಾಯನ ಅಬ್ಬರಕ್ಕೆ ಮನೆ ಕುಸಿದು ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಚೀಲದಲ್ಲಿ ಕಟ್ಟಿಕೊಂಡು ಆಸ್ಪತ್ರೆಗೆ ಹೊತ್ತೊಯ್ದ ಘಟನೆ ಕಳಸದಲ್ಲಿ ನಡೆದಿದೆ.
![kalasa](https://etvbharatimages.akamaized.net/etvbharat/prod-images/kn-ckm-16-manakalakuvagatane-av-7202347-exclusive_09082019214802_0908f_1565367482_561.jpg)
ಮಲೆನಾಡಿನಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಕಳಸದ ಕಳಕೋಡು ಗ್ರಾಮದಲ್ಲಿ ಮನೆ ಕುಸಿದು ಬಿದ್ದಿದೆ. ಇದರಲ್ಲಿ ವಾಸವಿದ್ದ ಸರೋಜಾ (55) ಎಂಬ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಆಸ್ಪತ್ರೆಗೆ ಕರೆದೊಯ್ಯಲು ವಾಹನ ಸೌಲಭ್ಯ ಇಲ್ಲದ ಕಾರಣ ಊರಿನ ಗ್ರಾಮಸ್ಥರೇ ಹೊತ್ತೊಯ್ದಿದ್ದಾರೆ.
ಎರಡು ಬಿದಿರಿನ ಬೊಂಬುಗಳಿಗೆ ಬೆಡ್ ಶೀಟ್ ಹಾಗೂ ಚೀಲವನ್ನು ಕಟ್ಟಿ ಸುಮಾರು ಎರಡು ಕಿಲೋಮೀಟರ್ ದೂರ ಹೆಗಲ ಮೇಲೆಯೇ ಹೊತ್ತು ಸಾಗಿದ್ದಾರೆ. ಈ ಮನಕಲಕುವ ದೃಶ್ಯ 'ಈಟಿವಿ ಭಾರತ'ಕ್ಕೆ ಲಭ್ಯವಾಗಿದೆ. ಗಾಯಾಳು ಸರೋಜಾ ಕಳಸದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.