ಚಿಕ್ಕಮಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ವಿಶೇಷಚೇತನ ಯುವತಿಯೊಬ್ಬಳು ಖಾಸಗಿ ಆಸ್ಪತ್ರೆ ನಿರ್ಲಕ್ಷ್ಯದಿಂದ ಮೃತಪಟ್ಟಿದ್ದಾಳೆ ಎಂಬ ಆರೋಪ ಜಿಲ್ಲೆಯಲ್ಲಿ ಕೇಳಿ ಬಂದಿದೆ.
ನಾಫಿಯಾ(20) ಮೃತ ದುರ್ದೈವಿ. ಜುಲೈ 24ರಂದು ತೀವ್ರ ಜ್ವರದಿಂದ ಬಳಲುತ್ತಿದ್ದ ಯುವತಿಯನ್ನು ಪೋಷಕರು ಆಸ್ಪತ್ರೆಗೆ ದಾಖಲಿಸಲು ಅಲೆದಾಡಿದ್ದಾರೆ. ಆದರೆ ಕೊರೊನಾ ವರದಿ ತನ್ನಿ ನಂತರ ಆಸ್ಪತ್ರೆಗೆ ದಾಖಲಿಸಿಕೊಳ್ಳುತ್ತೇವೆ ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ. ಕೊನೆಗೆ ಟೆಸ್ಟ್ ಮಾಡಿಸಲು ಹೋದಾಗ ಒಂದೂವರೆ ಗಂಟೆ ಕಾಲ ಕಾಯಿಸಲಾಗಿದೆಯಂತೆ. ಆ ಬಳಿಕ ವಿಧಿಯಿಲ್ಲದೆ ಜಿಲ್ಲಾಸ್ಪತ್ರೆಗೆ ತಂದು ಆಡ್ಮಿಟ್ ಮಾಡಿದ ತಕ್ಷಣ ಯುವತಿಯ ಪ್ರಾಣ ಪಕ್ಷಿ ಹಾರಿ ಹೋಗಿದೆ.
ಮೃತ ಯುವತಿಯ ಕೋವಿಡ್ ವರದಿ ನೆಗೆಟಿವ್ ಬಂದಿದೆ. ಆದರೆ ಯುವತಿಯ ಮನೆಯನ್ನು ಅಧಿಕಾರಿಗಳು ಸೀಲ್ ಡೌನ್ ಮಾಡಿದ್ದಾರೆ. ಕೊನೆಗೆ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ತಾಯಿಗೂ ಯುವತಿಯ ಮುಖವನ್ನು ನೋಡಲು ಕೂಡ ಬಿಡದೆ ಅಂತ್ಯ ಸಂಸ್ಕಾರ ನಡೆಸಿದ್ದಾರೆ ಎಂಬ ಆರೋಪ ಸಹ ಕೇಳಿ ಬಂದಿದೆ.