ಚಿಕ್ಕಮಗಳೂರು : ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಮೀತಿ ಮೀರುತ್ತಿದೆ. ಇದರಿಂದ ಜನರು ಬೇಸತ್ತು ಅರಣ್ಯ ಇಲಾಖೆಯ ವಿರುದ್ಧ ಹಿಡಿಶಾಪ ಹಾಕುವಂತಾಗಿದೆ.
ಕಳೆದ ಎರಡು ದಿನಗಳಿಂದ ಮೂರು ಕಾಡಾನೆಗಳು ಪ್ರತ್ಯಕ್ಷವಾಗಿ ಜನರಲ್ಲಿ ಆತಂಕ ಮೂಡಿಸಿವೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ವ್ಯಾಪ್ತಿಯ ಹೆಬ್ರಿಗೆ ಗ್ರಾಮದಲ್ಲಿ ಮೂರು ಕಾಡಾನೆಗಳು ಪ್ರತ್ಯಕ್ಷವಾಗಿವೆ. ಜನರು ರಸ್ತೆಯಲ್ಲಿ ಸಂಚಾರ ಮಾಡೋದಕ್ಕೆ ಭಯ ಪಡುವಂತಾಗಿದೆ.
ಮೂರು ಕಾಡಾನೆಗಳು ಬಂದಿರುವ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ಗ್ರಾಮಸ್ಥರು ಮಾಹಿತಿ ನೀಡಿದರೂ ಸ್ಥಳಕ್ಕೆ ಯಾವುದೇ ಅಧಿಕಾರಿಗಳು ಬಂದಿಲ್ಲ ಎಂಬ ಆರೋಪಗಳೂ ಕೇಳಿ ಬರುತ್ತಿವೆ. ಇದರಿಂದ ಹಳ್ಳಿಯ ಜನರಲ್ಲಿ ಆತಂಕ ಮನೆ ಮಾಡಿದೆ.
ಬೆಳಗ್ಗೆಯಿಂದ ಮೂರು ಕಾಡಾನೆಗಳು ಒಂದೇ ಸ್ಥಳದಲ್ಲಿ ಬೀಡು ಬಿಟ್ಟಿದ್ದು, ನಿನ್ನೆ ಈ ಕಾಡಾನೆಗಳು ಸಬ್ಲಿ ಗ್ರಾಮದಲ್ಲಿ ಪ್ರತ್ಯಕ್ಷವಾಗಿ ಆ ಭಾಗದ ಜನರಲ್ಲಿ ಭಯ ಹುಟ್ಟಿಸಿದ್ದವು. ಕಾಡಾನೆಗಳು ಒಂದು ಗ್ರಾಮದಿಂದ ಮತ್ತೊಂದು ಗ್ರಾಮದಲ್ಲಿ ಕಾಣಿಸುತ್ತಿದ್ದು, ಈಗಾಗಲೇ ಕಾಫಿ, ಅಡಿಕೆ ಹಾಗೂ ಇತರೆ ಬೆಳೆಗಳನ್ನು ನಾಶ ಮಾಡಿವೆ.
ಈ ಹಿಂದೆ ಅನೇಕ ಬಾರಿ ಅರಣ್ಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಬರ್ತಾರೆ, ಪಟಾಕಿ ಸಿಡಿಸಿ ಹೋಗುತ್ತಾರೆ. ಹೀಗಾಗಿ, ಈ ಭಾಗದಲ್ಲಿ ಶಾಶ್ವತ ಪರಿಹಾರ ಹುಡುಕಬೇಕು ಎಂದು ಜನರು ಮನವಿ ಮಾಡುತ್ತಿದ್ದಾರೆ.