ಚಿಕ್ಕಮಗಳೂರು: ಜಿಲ್ಲೆಯ ಆಲ್ದೂರು ಅರಣ್ಯ ವಲಯ ವ್ಯಾಪ್ತಿಯಲ್ಲಿ ಉಪಟಳ ನೀಡುತ್ತಿದ್ದ ಕಾಡಾನೆಗಳ ಹಿಂಡು ಗುರುವಾರ ಬೆಳಿಗ್ಗೆ ನಗರದ ಸೆರಗಂಚಿನ ಗ್ರಾಮ ನೆಲ್ಲೂರು ಪ್ರವೇಶಿಸಿವೆ. ನಗರದಿಂದ ಕೇವಲ ಅರ್ಧ ಕಿಲೋ ಮೀಟರ್ ದೂರದಲ್ಲಿರುವ ನೆಲ್ಲೂರಿನ ಕಬ್ಬಿನ ಗದ್ದೆಯಲ್ಲಿ ಬೀಡು ಬಿಟ್ಟಿರುವುದು ತಿಳಿಯುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಸೇರಿದ ಗ್ರಾಮಸ್ಥರು ಸೇರಿ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಮಹೇಶ್ ಬಾಬು ಮತ್ತು ಸಿಬ್ಬಂದಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ ಸ್ಥಳಕ್ಕೆ ಭೇಟಿ ನೀಡಿ, ಸಾರ್ವಜನಿಕರನ್ನು ಸಮಾಧಾನಪಡಿಸುವ ಪ್ರಯತ್ನ ನಡೆಸಿದರು.
ಗದ್ದೆಯಿಂದ ಆನೆಗಳ ಹಿಂಡು ನಗರಕ್ಕೆ ನುಗ್ಗುವ ಸಾಧ್ಯತೆ ಇರುವ ಕಾರಣ ನೆಲ್ಲೂರು ಸೇರಿದಂತೆ ಸುತ್ತಲಿನ ಶಾಲೆಗಳಿಗೆ ಬೆಳಿಗ್ಗೆ ರಜೆ ಘೋಷಿಸಲಾಗಿತ್ತು. ಪಟಾಕಿಗಳನ್ನು ಸಿಡಿಸಿ ಆನೆಗಳನ್ನು ಹಿಮ್ಮೆಟ್ಟಿಸುವ ಕಾರ್ಯ ನಡೆಯಿತು. ಸುಮಾರು ಒಂದು ಗಂಟೆ ನಂತರ ಆನೆಗಳು ನಿಧಾನವಾಗಿ ಕಬ್ಬಿನ ಗದ್ದೆಯಿಂದ ಸರಿದು ಗುಡ್ಡದ ತಪ್ಪಲಿನ ಅರಣ್ಯದೆಡೆಗೆ ಚಲಿಸಲಾರಂಭಿಸಿದವು. ಡ್ರೋನ್ ಕ್ಯಾಮರಾಗಳ ಮೂಲಕ ಆನೆಗಳ ಚಲನವಲನ ಗಮನಿಸಿ ಅರಣ್ಯದೆಡೆಗೆ ಹೋಗುತ್ತಿರುವುದನ್ನು ದೃಢಪಡಿಸಿಕೊಳ್ಳಲಾಯಿತು.
ಕಾಡಾನೆಗಳು ಸಂಚರಿಸುತ್ತಿದ್ದ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಅಪಾರ ಪ್ರಮಾಣದಲ್ಲಿ ಬೆಳೆ ನಾಶಪಡಿಸಿದ್ದು ಕಂಡುಬಂದಿದೆ. ಕತ್ತಿಗೆ ರೇಡಿಯೋ ಕಾಲರ್ ಧರಿಸಿರುವ ಭುವನೇಶ್ವರಿ ಆನೆ ಕೂಡ ಈ ತಂಡದಲ್ಲಿತ್ತು. ಈ ಆನೆಗೆ ಅರಣ್ಯ ಇಲಾಖೆಯೇ ಹಿಂದೆ ರೇಡಿಯೋ ಕಾಲರ್ ಅಳವಡಿಸಿ ಭುವನೇಶ್ವರಿ ಎಂದು ಹೆಸರಿಟ್ಟಿದೆ.
ಸಕಲೇಶಪುರ-ಆಲೂರು ಮಾರ್ಗವಾಗಿ ಮೂಡಿಗೆರೆಯಿಂದ ಆಲ್ದೂರು ಅರಣ್ಯ ವಲಯಕ್ಕೆ ಬಂದಿರುವ 4-5 ಆನೆಗಳ ಜೊತೆಗೆ ಭುವನೇಶ್ವರಿಯೂ ಸೇರಿಕೊಂಡಿದೆ ಎಂದು ತಿಳಿದು ಬಂದಿದೆ. ಸುಮಾರು 1 ತಿಂಗಳಿಗಿಂತಲೂ ಹಿಂದಿನಿಂದ ಈ ಆನೆಗಳ ಗುಂಪು ಮೂಡಿಗೆರೆ, ಆಲ್ದೂರು ವಲಯದಲ್ಲಿ ಬೀಡು ಬಿಟ್ಟಿವೆ. ಇದೀಗ ಚಿಕ್ಕಮಗಳೂರು ನಗರದಂಚಿನ ಗ್ರಾಮಗಳಿಗೆ ಲಗ್ಗೆಯಿಡಲಾರಂಭಿಸಿವೆ.
ಗ್ರಾಮಸ್ಥರ ಆಕ್ರೋಶ: ಆನೆ ದಾಳಿ ಭೀತಿಯಿಂದ ಕಾರ್ಮಿಕರು ಕೆಲಸಕ್ಕೆ ಬರುತ್ತಿಲ್ಲ. ಗ್ರಾಮಸ್ಥರು ಮನೆಗಳಿಂದ ಹೊರಬರಲಾಗುತ್ತಿಲ್ಲ. ನಮ್ಮ ಗೋಳನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ಹೊರಹಾಕಿದರು. ಇತ್ತೀಚೆಗಷ್ಟೇ ನೆಲ್ಲೂರು ಪಕ್ಕದ ಮತ್ತಾವರ ಗ್ರಾಮದ ಸುತ್ತಮುತ್ತ ದಾಳಿ ಮಾಡಿರುವ ಆನೆಗಳು ಭಾರಿ ಪ್ರಮಾಣದ ಬೆಳೆ ಹಾನಿಪಡಿಸಿದ್ದವು.
ಇದನ್ನೂ ಓದಿ: ಮೂಡಿಗೆರೆ ತಾಲೂಕಿನಲ್ಲಿ ಕಾಡಾನೆ ಸೆರೆ; ಗ್ರಾಮಸ್ಥರು ಹೇಳಿದ್ದೇನು?