ಚಿಕ್ಕಮಗಳೂರು: ಸೆರೆ ಕಾರ್ಯಾಚರಣೆ ವೇಳೆ ಕಾಡಾನೆ ಮೃತಪಟ್ಟಿರುವ ಘಟನೆ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಊರುಬಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮೇಕನಗದ್ದೆ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ.
ಕಳೆದೊಂದು ವಾರದಿಂದ ಕಾರ್ಯಾಚರಣೆ: ಕಾಡಾನೆ ಹಿಡಿಯುವ ಕಾರ್ಯಾಚರಣೆ ವೇಳೆ ಆನೆ ಮೃತಪಟ್ಟಿದೆ ಎಂದು ತಿಳಿದು ಬಂದಿದೆ. ಈ ಭಾಗದಲ್ಲಿ ಮೂರು ಕಾಡಾನೆಗಳನ್ನು ಸೆರೆ ಹಿಡಿದು ಸಾಗಿಸಲು ಸರ್ಕಾರ ಆದೇಶಿಸಿತ್ತು. ಆ ಪ್ರಕಾರ ಕಳೆದ ಒಂದು ವಾರದಿಂದ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ನಿನ್ನೆ ರಾತ್ರಿ ಮೇಕನಗದ್ದೆ ಗ್ರಾಮದ ಸಮೀಪ ಕಾಡಾನೆ ಕಾಣಿಸಿಕೊಂಡಿದ್ದು, ಅರವಳಿಕೆ ಚುಚ್ಚು ಮದ್ದು ಹಾಕಲಾಗಿತ್ತು. ಅರವಳಿಕೆ ಚುಚ್ಚು ಮದ್ದು ಹಾಕಿದ ನಂತರ ಆನೆಯ ಜಾಡು ಹಿಡಿದು ಹೋದಾಗ, ಸ್ವಲ್ಪ ದೂರದಲ್ಲೇ ಕಾಡಾನೆ ಮೃತಪಟ್ಟು ಬಿದ್ದಿರುವುದು ಕಂಡುಬಂದಿದೆ.
ಕಾರ್ತಿಕ್ ಗೌಡ ಸಾವು: ಶನಿವಾರ ರಾತ್ರಿ ಸುಮಾರು 11-30ರ ವೇಳೆಗೆ ಈ ಘಟನೆ ನಡೆದಿದೆ. ಇತ್ತೀಚೆಗೆ ಆನೆ ಕಾರ್ಯಪಡೆ ಸಿಬ್ಬಂದಿ ಕಾರ್ತಿಕ್ ಗೌಡ ಅವರನ್ನು ಕಾಡಾನೆಯೊಂದು ತುಳಿದು ಸಾಯಿಸಿತ್ತು. ಕಾರ್ತಿಕ್ ಕೊನೆಯುಸಿರೆಳೆದ ದೊಡ್ಡಗೊಳ್ಳ ಎಂಬ ಸ್ಥಳದ ಸಮೀಪದಲ್ಲಿಯೇ ಕಾಡಾನೆ ಸತ್ತು ಬಿದ್ದಿದೆ. ಸಾವನ್ನಪ್ಪಿರುವ ಆನೆ ಒಂಟಿ ಗೊಂಬಿನ ಆನೆಯಾಗಿದೆ. ಈ ಆನೆ ಅನೇಕ ವರ್ಷಗಳಿಂದ ಈ ಭಾಗದಲ್ಲಿ ಸಂಚರಿಸುತ್ತಿತ್ತು. ಆನೆ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಅರಣ್ಯ ಇಲಾಖೆಯಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಸದ್ಯ ಈ ಬಗ್ಗೆ ತನಿಖೆ ಮುಂದುವರಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಮಲೆನಾಡಿನ ಕೆಲ ಭಾಗಗಳಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದೆ. ಕಳೆದ ಎರಡು ತಿಂಗಳಲ್ಲಿ ಮೂವರು ಸಾಪನ್ನಪ್ಪಿದ್ದಾರೆ. ಆನೆ ನಿಗ್ರಹ ಪಡೆಯಲ್ಲಿ ಕೆಲಸ ಮಾಡುತ್ತಿದ್ದವರೇ ಕೊನೆಯುಸಿರೆಳೆದು ಜನರ ಆತಂಕಕ್ಕೆ ಕಾರಣವಾಯಿತು. ಪರಿಣಾಮ, ಕಾಡಾನೆಗಳನ್ನು ಸೆರೆ ಹಿಡಿದು ಸೂಕ್ತ ಪ್ರದೇಶಗಳಿಗೆ ಸ್ಥಳಾಂತರಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದರು. ಈ ಹಿನ್ನೆಲೆ ನವೆಂಬರ್ ಕೊನೆ ವಾರದಲ್ಲಿ ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳು ಜನರಿಗೆ ಉಪಟಳ ನೀಡುತ್ತಿರುವ ಆನೆಗಳನ್ನು ಸೆರೆ ಹಿಡಿಯುವಂತೆ ಆದೇಶ ಹೊರಡಿಸಿತ್ತು.
ಇದನ್ನೂ ಓದಿ: ಚಿಕ್ಕಮಗಳೂರು: ಕಾಡಾನೆಗಳನ್ನು ಹಿಡಿಯಲು ಅರಣ್ಯ ಇಲಾಖೆ ಆದೇಶ!
ಊರುಬಗೆ, ಬೈರಾಪುರ, ಗೌಡಹಳ್ಳಿ, ಹೊಸಕೆರೆ, ಮೇಕನಗದ್ದೆ ಸೇರಿದಂತೆ ಮೂಡಿಗೆರೆಯ ಕೆಲ ಗ್ರಾಮಗಳಲ್ಲಿ ಸಂಚರಿಸುತ್ತಾ, ಜನರ ಚಿಂತೆಗೆ ಕಾರಣವಾಗಿರುವ ಮೂರು ಕಾಡಾನೆಗಳನ್ನು ಗುರುತಿಸಿ ಸೆರೆ ಹಿಡಿಯಬೇಕು. ಭದ್ರಾ ಹುಲಿ ಸಂರಕ್ಷಿತಾ ಪ್ರದೇಶದ ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸುವಂತೆ ಆದೇಶದಲ್ಲಿ ತಿಳಿಸಲಾಗಿತ್ತು. ಸಂಬಂಧಪಟ್ಟ ಅಧಿಕಾರಿಗಳು ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ತೊಡಗಿದ್ದರು.
ಇದನ್ನೂ ಓದಿ: 'ಈ ದೇಶವನ್ನು ಆಳುವ ನಾಯಕತ್ವ ಬಿಜೆಪಿ ಬಿಟ್ಟು ಬೇರೆ ಪಕ್ಷಗಳಲ್ಲಿಲ್ಲ ': ಬಿಎಸ್ವೈ