ಚಿಕ್ಕಮಗಳೂರು: ಬಿಜೆಪಿ ಇರಲಿ, ಕಾಂಗ್ರೆಸ್ ಇರಲಿ ಅಥವಾ ಜೆಡಿಎಸ್ ಇರಲಿ, ಜನರ ಕಣ್ಣು ತೆರೆಸುವ ಕೆಲಸ ಯಾವುದೇ ಪಕ್ಷ ಮಾಡಿದರೂ ನಾನು ಸ್ವಾಗತ ಮಾಡುತ್ತೇನೆ ಎಂದು ಚಿಕ್ಕಮಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಹೇಳಿದರು.
ಬಸವನಗೌಡ ಪಾಟೀಲ್ ಯತ್ನಾಳ್ ಅವರು ಮುಖ್ಯಮಂತ್ರಿ ಯಡ್ಡಿಯೂರಪ್ಪ ಅವರಿಗೆ 76 ವರ್ಷ ವಯಸ್ಸು ಆಗಿದೆ. ಅವರ ರಾಜೀನಾಮೆ ಪಡೆಯಿರಿ ಎಂಬ ಹೇಳಿಕೆ ಕುರಿತು ಮಾತನಾಡಿದ ಅವರು, ಬಿಜೆಪಿ ಪಕ್ಷದವರು ಒಂದು ಸಿಸ್ಟಮ್ ಮಾಡಿಕೊಂಡಿದ್ದಾರೆ. ಮುರುಳಿ ಮನೋಹರ್ ಜೋಷಿ, ಅಡ್ವಾಣಿ ಅವರಿಗೆ ಬಿಡಲಿಲ್ಲ. ಮೋದಿ ಅವರು ಹೇಳಿದ್ದಾರೆ 75ಕ್ಕೇ ನಿವೃತ್ತಿ ಆಗುತ್ತೇನೆ ಎಂದು. ಅದು ಅವರ ಪಾಲಿಸಿ ಇರಬಹುದು. 80 ವರ್ಷದವರು ಮುಖ್ಯಮಂತ್ರಿ ಆಗಿದ್ದಾರೆ. ಯಾಕೆ ಕರುಣಾನಿಧಿ ಆಗಿರಲಿಲ್ವಾ?. ಅದು ಅವರ ಆಂತರಿಕ ವಿಚಾರ. ಶಕ್ತಿ ಇದ್ದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವಕಾಶ ಮಾಡಿಕೊಟ್ಟಿದ್ದರೆ ಅದರಲ್ಲೇನು ತಪ್ಪಿಲ್ಲ ಎಂದಿದ್ದಾರೆ.
ಅವರವರ ಆಂತರಿಕ ಪ್ರಜಾಪ್ರಭುತ್ವದಲ್ಲಿ ಈ ರೀತಿ ಮಾಡಿಕೊಂಡಿದ್ದರೆ, ನಾನು ಯಾಕೆ ಮಾತನಾಡಬೇಕು. ರಾಜ್ಯದ ವಿಚಾರ ಹಾಗೂ ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿಯವರು ರಾಜ್ಯದ ಜನರ ಪರ ಮಾತನಾಡಿದರೆ ನಾನು ಸಂಪೂರ್ಣವಾಗಿ ಸ್ವಾಗತಿಸುತ್ತೇನೆ ಎಂದರು.