ಚಿಕ್ಕಮಗಳೂರು : ಕೊರೊನಾ ಮಧ್ಯೆಯೇ ಕೆಲವು ತಿಂಗಳು ನಾವೆಲ್ಲಾ ಬದುಕಬೇಕಾಗಿದೆ. ಕರ್ಫ್ಯೂ ಮಾಡಿ ಜನರ ಜೀವನಕ್ಕೆ ತೊಂದರೆ ಕೊಡುವುದು ಸರಿಯಲ್ಲ. ಜನ ಶಿಸ್ತನ್ನ ಫಾಲೋ ಮಾಡಿದರೆ ಲಾಕ್‍ಡೌನ್, ಕರ್ಫ್ಯೂ ಅಗತ್ಯವಿಲ್ಲ. ಸಾರ್ವಜನಿಕರು ಸಹ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸ್ಯಾನಿಟೈಜರ್ ಬಳಸಿ, ಸಾಮಾಜಿಕ ಅಂತರ ಕಾಪಾಡಬೇಕು ಎಂದು ಚಿಕ್ಕಮಗಳೂರಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಸರ್ಕಾರ, ಆರೋಗ್ಯ ಇಲಾಖೆ, ತಜ್ಞರ ಅಭಿಪ್ರಾಯ ಪಡೆದು ನಿರ್ಧಾರ ಮಾಡಬೇಕು. ಲಾಕ್‍ಡೌನ್‍ನಿಂದ ಆರ್ಥಿಕವಾಗಿ ಹಿನ್ನೆಡೆಯಾಗ್ತಿದೆ ಅನ್ನೋದು ಜನರ ಭಾವನೆ. ಸರ್ಕಾರ ಕರ್ಫ್ಯೂವನ್ನ ವಿಥ್‍ಡ್ರಾ ಮಾಡಬೇಕು. ಮಾಸ್ಕ್, ಸ್ಯಾನಿಟೈಜರ್, ಸಾಮಾಜಿಕ ಅಂತರ ಕಾಪಾಡಲು ಕ್ರಮವನ್ನು ಕೈಗೊಳ್ಳಲಿ ಎಂದು ಸಚಿವೆ ಶೋಭಾ ಕರಂದ್ಲಾಜೆ ಸಲಹೆ ನೀಡಿದ್ದಾರೆ.
ವೈಯಕ್ತಿಕ ಅಭಿಪ್ರಾಯಕ್ಕಿಂತ ತಜ್ಞರ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕು. ಕರ್ಫ್ಯೂದಿಂದ ಆಟೋ, ಟ್ಯಾಕ್ಸಿ, ಹೋಟೆಲ್ ಉದ್ಯಮಕ್ಕೆ ಸಮಸ್ಯೆಯಾಗುತ್ತದೆ. ಎರಡು ವರ್ಷದಿಂದ ಕೊರೊನಾ ನಮ್ಮ ಜೊತೆಯೇ ಇದೆ ಎಂದು ಚಿಕ್ಕಮಗಳೂರಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಇದನ್ನೂ ಓದಿ: ವೀಕೆಂಡ್ ಕರ್ಫ್ಯೂ ಇದೆಲ್ಲಾ ಹುಚ್ಚರು ನೀಡುವ ಆದೇಶ : ಬಿಜೆಪಿ ಸರ್ಕಾರದ ವಿರುದ್ಧ ಹೆಚ್. ವಿಶ್ವನಾಥ್ ವಾಗ್ದಾಳಿ..
3ನೇ ಅಲೆ ಜೀವಕ್ಕೆ ಅಪಾಯವಿಲ್ಲ: ಮೂರನೇ ಅಲೆಯಲ್ಲಿ ಜೀವಕ್ಕೆ ಅಪಾಯವಿಲ್ಲವೆಂಬುದು ಅನುಭವಕ್ಕೆ ಬಂದಿದೆ. ಜೀವಕ್ಕೆ ಅಪಾಯ ಇಲ್ಲವೆಂದ ಮೇಲೆ ಜೀವನ ನಡೆಯಬೇಕಲ್ವಾ? ಎಂದು ಚಿಕ್ಕಮಗಳೂರಿನಲ್ಲಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ ರವಿ ಹೇಳಿದ್ದಾರೆ.
ಪಾಸಿಟಿವಿಟಿ ರೇಟ್ ಜಾಸ್ತಿ ಇದೆ, ತೀವ್ರತೆ ಕಡಿಮೆಯಿದೆ. ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯೂ ಕೂಡ ಕಡಿಮೆಯಿದೆ. ಲಾಕ್‍ಡೌನ್, ಕರ್ಫ್ಯೂವನ್ನ ಕೈ ಬಿಡಬೇಕು ಎಂಬುದು ಜನರ ಅಪೇಕ್ಷೆಯಾಗಿದೆ. ಜನರ ಅಪೇಕ್ಷೆಯನ್ನು ನಾನು ಸರ್ಕಾರದ ಗಮನಕ್ಕೆ ತಂದಿದ್ದೇನೆ. ಇದೇ ಹಿನ್ನೆಲೆ ಸರ್ಕಾರ ಕೂಡ ಆಲೋಚನೆ ಮಾಡಿರುತ್ತೆ ಎಂಬ ವಿಶ್ವಾಸವಿದೆ ಎಂದು ಹೇಳುವ ಮೂಲಕ ವೀಕೆಂಡ್ ಕರ್ಫ್ಯೂ ವಿರುದ್ಧ ಶಾಸಕ ಸಿ.ಟಿ ರವಿ ಅಸಮಾಧಾನ ಹೊರ ಹಾಕಿದ್ದಾರೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ