ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಹಾಗೂ ಎನ್.ಆರ್.ಪುರ ತಾಲೂಕಿನಲ್ಲಿ ಸಂಪರ್ಕಕ್ಕೂ ಸಿಗದೇ ಗುಡ್ಡಗಾಡು ಪ್ರದೇಶದಲ್ಲಿ ಸಿಲುಕಿಕೊಂಡಿದ್ದ 75 ಜನರನ್ನು ಭಾರತೀಯ ಸೇನೆಯ ಯೋಧರು ರಕ್ಷಣೆ ಮಾಡಿದ್ದಾರೆ.
ನಿನ್ನೆ ಜಿಲ್ಲೆಗೆ 40 ಜನ ಭಾರತೀಯ ಸೇನೆಯ ಯೋಧರು ಆಗಮಿಸಿದ್ದು, ಇಂದು ಆ ಎಲ್ಲಾ ಯೋಧರು ಕೊಟ್ಟಿಗೆಹಾರದ ಬಳಿ ಇರುವ ಆಲೇಖಾನ್ ಹೊರಟ್ಟಿ ಗ್ರಾಮಕ್ಕೆ ತೆರಳಿ ಸುಮಾರು 75 ಜನರನ್ನು ರಕ್ಷಣೆ ಮಾಡಿದ್ದಾರೆ. ಈ ಗ್ರಾಮದ ಎಲ್ಲಾ ಜನರು ಸುಮಾರು ನಾಲ್ಕು ದಿನಗಳಿಂದ ಸಂಪರ್ಕ ಕಳೆದುಕೊಂಡು ಗ್ರಾಮದಲ್ಲಿ ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದರು.
ಇಂದು ಅಲ್ಲಿ ತೆರಳಿದ ಸೇನಾ ಸಿಬ್ಬಂದಿ ಗುಡ್ಡಗಾಡು ಪ್ರದೇಶದಲ್ಲಿ ಹಗ್ಗ ಕಟ್ಟಿ ಜನರನ್ನು ಹೆಗಲ ಮೇಲೆ ಹೊತ್ತು ಕೊಟ್ಟಿಗೆಹಾರಕ್ಕೆ ಕರೆದುಕೊಂಡು ಬಂದಿದ್ದು, ನಿರಾಶ್ರಿತರ ಕೇಂದ್ರಕ್ಕೆ ಬಿಟ್ಟಿದ್ದಾರೆ. ಇದರಿಂದ ಪ್ರತಿಯೊಬ್ಬರೂ ನಿಟ್ಟುಸಿರು ಬಿಡುವಂತಾಗಿದೆ. ಯೋಧರು ಬಂದು ನಮ್ಮನ್ನು ರಕ್ಷಣೆ ಮಾಡಿ ನಮಗೆ ಮರುಜೀವ ನೀಡಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.