ಚಿಕ್ಕಮಗಳೂರು : ಮಲೆನಾಡಿನ ಕಾಫಿಯನ್ನು ಇಡೀ ವಿಶ್ವಕ್ಕೆ ಪರಿಚಯ ಮಾಡಿ ಕೊಟ್ಟಿದ್ದ ಕಾಫಿ ಉದ್ಯಮಿ ವಿ.ಜಿ ಸಿದ್ದಾರ್ಥ ಹೆಗ್ಡೆಗೆ ಅವರ ಸ್ನೇಹಿತರು, ಹಿತೈಷಿಗಳು, ಅಕ್ಕ ಪಕ್ಕದ ಗ್ರಾಮಸ್ಥರು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.
ಜಿಲ್ಲೆ ಮೂಡಿಗೆರೆ ತಾಲೂಕಿನ ಚಟ್ಟನಹಳ್ಳಿ ಸಮೀಪದಲ್ಲಿ ಅವರ ತಂದೆ ಗಂಗಯ್ಯ ಹೆಗ್ಡೆ ಅವರು ಸಾರ್ವಜನಿಕರಿಗಾಗಿ ನಿರ್ಮಾಣ ಮಾಡಿರುವ ವಿವೇಕಾನಂದ ಸಭಾಂಗಣದಲ್ಲಿ ನೂರಾರು ಜನರು ಸೇರಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದು, ಚಟ್ಟನ ಹಳ್ಳಿ, ಚೀಕನಹಳ್ಳಿ, ಗೌತಹಳ್ಳಿ ಸೇರಿದಂತೆ ಸುತ್ತ ಮುತ್ತಲಿನ ಪ್ರದೇಶದಿಂದ ಜನರು ಆಗಮಿಸಿದ್ದರು.
ನೂರಾರು ಜನರು ಸಾಲುಗಟ್ಟಿ ನಿಂತು ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ಮಲೆನಾಡ ಮಾಣಿಕ್ಯನನ್ನು ನೆನೆದು ಅಪೂರ್ವವಾದ ಕ್ಷಣಗಳನ್ನು ಮೆಲುಕು ಹಾಕಿದರು. ಯಾರದಾರೂ ನಿಮ್ಮ ಊರು ಯಾವುದು ಎಂದರೆ ಸಿದ್ದಾರ್ಥ ಅವರ ಪಕ್ಕದ ಊರು ಎಂದೂ ಹೇಳಿಕೊಳ್ಳುತ್ತಿದ್ದೆವು. ಸಿದ್ದಾರ್ಥ ಅವರು ಮಾಡಿರುವಂತಹ ಶಾಲೆ, ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾಡಿರುವಂತಹ ಕೆಲಸ ಹಾಗೂ ಉಚಿತವಾಗಿ ರೋಗಿಗಳಿಗೆ ಆಸ್ವತ್ರೆಯಲ್ಲಿ ಚಿಕಿತ್ಸೆ ಈ ಕೆಸಲಗಳು ನಿಲ್ಲಬಾರದು. ಸರ್ಕಾರ ಇದರ ಬಗ್ಗೆ ಗಮನ ಹರಿಸಬೇಕು. ಸಿದ್ದಾರ್ಥ್ ಸಾವಿಗೆ ಪರೋಕ್ಷವಾಗಿ ಕಾರಣವಾದ ವ್ಯವಸ್ಥೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಜನರು ಆಗ್ರಹಿಸಿದರು.