ಉಡುಪಿ/ಚಿಕ್ಕಮಗಳೂರು: ಮೊದಲ ಹಂತದ ಲೋಕಸಭೆ ಚುನಾವಣೆಯ ಭಾಗವಾಗಿರುವ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಮತದಾನಕ್ಕೆ ವೇದಿಕೆ ಸಿದ್ಧಗೊಂಡಿದೆ. ಕಾಂಗ್ರೆಸ್, ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳಿಂದ ಒಟ್ಟು 12 ಮಂದಿ ಅಭ್ಯರ್ಥಿಗಳು ಈ ಬಾರಿ ಕಣದಲ್ಲಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿ ವರ್ಸಸ್ ಮೈತ್ರಿ ಅಭ್ಯರ್ಥಿ ನಡುವೆ ತುರುಸಿನ ಪೈಪೋಟಿ ಎದ್ದು ಕಾಣುತ್ತಿದೆ. ಬಿಜೆಪಿಯಿಂದ ಶೋಭಾ ಕರಂದ್ಲಾಜೆ ಕಣದಲ್ಲಿದ್ದರೆ, ಕೈ-ತೆನೆ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಪ್ರಮೋದ್ ಮದ್ವರಾಜ್ ಚುನಾವಣಾ ಅಖಾಡದಲ್ಲಿ ಗೆಲುವಿಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಇನ್ನುಳಿದಂತೆ ಶಿವಸೇನೆಯಿಂದ ಗೌತಮ್ ಪ್ರಭು, ಉತ್ತಮ ಪ್ರಜಾಕೀಯ ಪಕ್ಷದಿಂದ ಸುರೇಶ ಕುಂದರ್, ಪಕ್ಷೇತರ ಅಭ್ಯರ್ಥಿಯಾಗಿ ಅಮೃತ್ ಶೆಣೈ, ಅಬ್ದುಲ್ ರೆಹಮಾನ್ ಸ್ಪರ್ಧಿಸುತ್ತಿದ್ದರೆ, ಬಿಎಸ್‌ಪಿಯಿಂದ ಪಿ. ಪರಮೇಶ್ವರ್ ಕಣದಲ್ಲಿರುವ ಪ್ರಮುಖರು.
ಕ್ಷೇತ್ರದಲ್ಲಿ ಶೋಭಾ v/s ಪ್ರಮೋದ್ ಮಧ್ವರಾಜ್
2014ರ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿದ್ದ ಶೋಭಾ ಕರಂದ್ಲಾಜೆ 1,81,634 ಮತಗಳ ಅಂತರದಿಂದ ವಿಜಯಪತಾಕೆ ಹಾರಿಸಿದ್ದರು. ಈ ಬಾರಿ ಮತ್ತೆ ಕಣಕ್ಕಿಳಿದಿರುವ ಅವರು ಕೇಂದ್ರ ಸರ್ಕಾರದ ಸಾಧನೆಗಳು, ಮೋದಿ ಅಲೆಯ ಜಾಡು ಹಿಡಿದು ಮರು ಆಯ್ಕೆ ಬಯಸಿದ್ದಾರೆ. ಇನ್ನೊಂದೆಡೆ, ಜಿಲ್ಲೆಯ ಪ್ರಭಾವಿ ಕಾಂಗ್ರೆಸ್ ನಾಯಕ ಪ್ರಮೋದ್ ಮಧ್ವರಾಜ್ ಈ ಬಾರಿ ಮೈತ್ರಿ ಅಭ್ಯರ್ಥಿಯಾಗಿ ಚುನಾವಣಾ ರೇಸ್‌ನಲ್ಲಿದ್ದು ಇದೇ ಮೊದಲ ಬಾರಿ ಸಂಸತ್ತು ಪ್ರವೇಶಿಸುವ ತವಕದಲ್ಲಿದ್ದಾರೆ. ರಾಜ್ಯ ಮೈತ್ರಿ ಸರ್ಕಾರದ ಸಾಧನೆಗಳನ್ನು, ಸಚಿವನಾಗಿದ್ದಾಗ ಮಾಡಿದ ಕೆಲಸಗಳನ್ನೇ ಚುನಾವಣೆ ಪ್ರಚಾರದ ವೇಳೆ ಬಳಸಿಕೊಂಡಿದ್ದು, ಗೆಲುವಿಗಾಗಿ ಹೋರಾಟ ನಡೆಸುತ್ತಿದ್ದಾರೆ.
ಕ್ಷೇತ್ರದಲ್ಲಿರುವ ಜಾತಿವಾರು ಮತದಾರರು:
- ಪರಿಶಿಷ್ಟ ಜಾತಿ: 2,65,122
- ಪರಿಶಿಷ್ಟ ಪಂಗಡ: 90,619
- ಅಲ್ಪಸಂಖ್ಯಾತರು: 2,89,181
- ಬಿಲ್ಲವರೂ 1,55,050
- ಬಂಟರು: 1,31,100
- ಮುಸ್ಲಿಮರು: 1,23,300
- ಮೊಗವೀರರು: 1,04,250
- ಒಕ್ಕಲಿಗರು: 1,05,700
- ಲಿಂಗಾಯತರು: 74,000
- ಬ್ರಾಹ್ಮಣ: 68,450
- ಕ್ರೈಸ್ತರು: 72,000
- ಕುರುಬರು: 54,000
- ಇತರೆ: 3,94,102.
ಚುನಾವಣಾ ಅಂಕಿಅಂಶಗಳು:
ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿರುವ ಒಟ್ಟು ಮತದಾರರ ಸಂಖ್ಯೆ 14,94,444. ಈ ಪೈಕಿ ಉಡುಪಿ ಜಿಲ್ಲೆಯಲ್ಲಿ 7,68,231 ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ 7,26,213 ಮತದಾರರಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 865 ಹಾಗು ಚಿಕ್ಕಮಗಳೂರಿನಲ್ಲಿ 972 ಮತಗಟ್ಟೆಗಳ ವ್ಯವಸ್ಥೆ ಮಾಡಲಾಗಿದೆ.
ಭದ್ರತಾ ವ್ಯವಸ್ಥೆ ಹೇಗಿದೆ?
ಉಡುಪಿ ಚಿಕ್ಕಮಗಳೂರು ಲೋಕಸಭಾ ವ್ಯಪ್ತಿಯ 54 ಮತಗಟ್ಟೆಗಳಿಗೆ ವೆಬ್ ಕ್ಯಾಮೆರಾ ವ್ಯವಸ್ಥೆ ಮಾಡಲಾಗಿದ್ದು, 15 ಮತಗಟ್ಟೆಗಳಿಗೆ ವೀಡಿಯೋಗ್ರಾಫರ್, 21 ಮತಗಟ್ಟೆಗಳಿಗೆ ಕೇಂದ್ರೀಯ ಭದ್ರತಾ ಪಡೆ ಸಿಬ್ಬಂದಿಯನ್ನು ನೇಮಿಸಲಾಗಿದೆ. ಜಿಲ್ಲೆಯಲ್ಲಿ 25 ಸಖೀ ಮತಗಟ್ಟೆ , 2 ವಿಶೇಷಚೇತನ ಮತಗಟ್ಟೆ, 1 ಎಥ್ನಿಕ್ ಬೂತ್ ತೆರೆಯಲಾಗಿದೆ. ವಿಶೇಷಚೇತನ ಮತದಾರರಿಗೆ ಗಾಲಿಕುರ್ಚಿ, ಬೂತ ಕನ್ನಡಿ, ಬ್ರೈಲ್ ಮಾದರಿ ಮತಪತ್ರ ವ್ಯವಸ್ಥೆ ಕಲ್ಪಿಸಲಾಗಿದೆ. ಕ್ಷೇತ್ರದಲ್ಲಿ 36 ನಕ್ಸಲ್‌ಪೀಡಿತ ಮತಗಟ್ಟೆಗಳಿದ್ದು, ಈ ಪ್ರದೇಶದಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಚುನಾವಣಾ ಕರ್ತವ್ಯಕ್ಕೆ ಪೊಲೀಸ್ ಸಿಬ್ಬಂದಿಯೊಂದಿಗೆ, ಕಾರಾಗೃಹ ಇಲಾಖೆ, ಹೋಂ ಗಾರ್ಡ್ ಫಾರೆಸ್ಟ್ ಗಾರ್ಡ್‌ಗಳು, 4 ಕೆ.ಎಸ್.ಆರ್.ಪಿ ತುಕಡಿ ಹಾಗೂ 2 ಐ.ಟಿ.ಡಿ.ಪಿ ತುಕಡಿಗಳನ್ನು ನಿಯೋಜಿಸಲಾಗಿದೆ.