ಚಿಕ್ಕಮಗಳೂರು: ಪೊಲೀಸರಿಂದ ತಪ್ಪಿಸಿಕೊಳ್ಳುವಾಗ ಟಿಪ್ಪರ್ ವಾಹನಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ಘಟನೆ ತರೀಕೆರೆ ತಾಲೂಕಿನ ಲಕ್ಕವಳ್ಳಿ ಸಮೀಪದ ಹುಣಸೆಹಳ್ಳಿ ಗೇಟ್ ಬಳಿ ನಡೆದಿದೆ.
ಶಿವಮೊಗ್ಗದ ನವುಲೇ ಗ್ರಾಮದ ಮೋಹನ್ ಹಾಗೂ ಕುಮಾರ್ ಎಂಬುವವರು ಮೃತರು ಎಂದು ಗುರುತಿಸಲಾಗಿದೆ. ರಸ್ತೆಯಲ್ಲಿ ಪೊಲೀಸರು ಹೆಲ್ಮೆಟ್ ಹಾಗೂ ಡಾಕ್ಯೂಮೆಂಟ್‍ಗಾಗಿ ದಂಡ ಹಾಕುತ್ತಿರುವುದನ್ನು ಗಮನಿಸಿದ ಬೈಕ್ ಸವಾರರು ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಈ ಅಪಘಾತ ನಡೆದಿದೆ ಎನ್ನಲಾಗಿದೆ.
ಟಿಪ್ಪರ್ ಲಾರಿಗೆ ಬೈಕ್ ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರ ದೇಹಗಳು ಛಿದ್ರ ಛಿದ್ರವಾಗಿವೆ. ಈ ವೇಳೆ ಸ್ಥಳೀಯರು, ಪೊಲೀಸರ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. ಲಕ್ಕವಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.