ಚಿಕ್ಕಮಗಳೂರು: ಬೈಕ್ ನಲ್ಲಿ ಬಂದು ಮಹಿಳೆಯರ ಮಾಂಗಲ್ಯ ಸರ ಕದ್ದು ಪರಾರಿಯಾಗುತ್ತಿದ್ದ ಇಬ್ಬರನ್ನು ಬಂಧಿಸುವಲ್ಲಿ ಚಿಕ್ಕಮಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ನಾಗರಾಜ್, ವಿನಯ್ ಬಂಧಿತ ಆರೋಪಿಗಳು. ಜಿಲ್ಲೆಯ ಬೀರೂರಿನ ಕ್ಯಾಂಪ್ ಮಾರ್ಕೆಟ್ ಬಳಿ ಪುಷ್ಪ ಎಂಬ ಮಹಿಳೆ ತಮ್ಮ ತಾಯಿ ಜೊತೆ ಹೋಗುತ್ತಿದ್ದ ವೇಳೆ ಬೈಕ್ ನಲ್ಲಿ ಬಂದ ಇಬ್ಬರು ಖದೀಮರು ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರ ಕಳ್ಳತನ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಅರ್ಧ ಸರ ತುಂಡಾಗಿ ಕುತ್ತಿಗೆಯಲ್ಲಿಯೇ ಉಳಿದಿದ್ದು, ಇನ್ನು ಅರ್ಧ ಸರವನ್ನು ಕಳ್ಳರು ಎಗರಿಸಿಕೊಂಡು ಹೋಗಿದ್ದರು.
ಈ ಕುರಿತು ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಆರಂಭಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಬಂಧಿತರಿಂದ ಒಂದು ಕಾರು ಹಾಗೂ ಬೈಕ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.