ಚಿಕ್ಕಮಗಳೂರು: ನಗರದ ಬೈಪಾಸ್ ರಸ್ತೆಯಲ್ಲಿರುವ ಕಲ್ಯಾಣ ನಗರದ ಮನೆಯೊಂದಕ್ಕೆ ಕಳ್ಳತನಕ್ಕೆ ಬಂದು ಸ್ಥಳೀಯರ ಕೈಗೆ ಸಿಕ್ಕಿಬಿದ್ದ ಕಳ್ಳರನ್ನು ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚಂದ್ರೇಗೌಡ ಎಂಬವರ ಮನೆಗೆ ಹಾಡಹಗಲೇ ನುಗ್ಗಿದ್ದ ಇಬ್ಬರು ಕಳ್ಳತನ ಮಾಡಿದ್ದರು. ಪರಾರಿಯಾಗುತ್ತಿದ್ದವರನ್ನು ಹಿಡಿಯಲು ಯತ್ನಿಸಿದವರ ಮೇಲೆ ಹಲ್ಲೆಗೆ ಮುಂದಾಗಿದ್ದು, ಆಗ ಸ್ಥಳೀಯರು ಕಲ್ಲು ತೂರಾಟ ನಡೆಸಿದ್ದರು. ಈ ವೇಳೆ ಗಾಯಗೊಂಡ ಕಳ್ಳರು ಸ್ಥಳೀಯರ ಕೈಗೆ ಸಿಕ್ಕಿ ಬಿದ್ದಿದ್ದರು.
ಸ್ಥಳೀಯರ ಸಹಾಯದಿಂದ ಆರೋಪಿಗಳನ್ನು ಚಿಕ್ಕಮಗಳೂರಿನ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಸಚಿನ್ ಮತ್ತು ಮೋಹನ್ ಬಂಧಿತ ಆರೋಪಿಗಳು. ಮನೆಗೆ ನುಗ್ಗಿ 75 ಗ್ರಾಂ ಚಿನ್ನಾಭರಣ, 50 ಸಾವಿರ ನಗದನ್ನು ಆರೋಪಿಗಳು ಕಳ್ಳತನ ಮಾಡಿದ್ದಾರೆ ಎಂದು ಮನೆಯ ಸದಸ್ಯರು ಆರೋಪ ಮಾಡಿದ್ದು, ನಗರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇದನ್ನೂ ಓದಿ:ಹಾಡಹಗಲೇ ಚಾಕು ತೋರಿಸಿ ಕಳ್ಳತನಕ್ಕೆ ಯತ್ನ... ಅಟ್ಟಾಡಿಸಿ ಹಿಡಿದ ಸ್ಥಳೀಯರು
ಆರೋಪಿಗಳನ್ನು ವಶಕ್ಕೆ ಪಡೆದಿರುವ ನಗರ ಠಾಣೆಯ ಪೊಲೀಸರು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ನಾಳೆ ನ್ಯಾಯಾಲಯದ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ.