ಚಿಕ್ಕಮಗಳೂರು : ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಶೃಂಗೇರಿ ತಾಲೂಕಿನಲ್ಲಿ ಇಂದು ಬೆಳಗ್ಗೆಯಿಂದ ವರುಣ ಅಬ್ಬರಿಸುತ್ತಿದ್ದಾನೆ.
ತುಂಗಾ ನದಿ ಹರಿವಿನ ಮಟ್ಟ ಹೆಚ್ಚಾಗುತ್ತಿದ್ದು, ಅಪಾಯದ ಮಟ್ಟ ಮೀರಿ ಹರಿಯಲು ಪ್ರಾರಂಭಿಸಿದೆ. ಗಾಂಧಿ ಮೈದಾನದಲ್ಲಿರುವ ಅಂಗಡಿಗಳು ಸಂಪೂರ್ಣ ಮುಳುಗಡೆಯಾಗಿವೆ. ಅಕ್ಕಪಕ್ಕದ ರಸ್ತೆಗಳು ಕೂಡ ಜಲಾವೃತವಾಗಿದೆ.
ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಜನರು ಮನೆಯಿಂದ ಹೊರ ಬರುವುದಕ್ಕೆ ಭಯ ಪಡುವ ಪರಿಸ್ಥಿತಿ ಈ ಭಾಗದಲ್ಲಿದೆ. ಶಾರದಾ ಬೀದಿಯ ಅಕ್ಕಪಕ್ಕದ ರಸ್ತೆಗಳಿಗೆ ಜಲ ದಿಗ್ಬಂಧನ ಹಾಕಿದೆ. ಶೃಂಗೇರಿಯ ನದಿ ತಟದ ಮನೆಗಳಿಗೆ ನೀರು ನುಗ್ಗಲು ಶುರುವಾಗಿದೆ.
ಈಗಾಗಲೇ ಈ ಭಾಗಕ್ಕೆ ಎನ್ಡಿಆರ್ಎಫ್ ತಂಡದ ಸಿಬ್ಬಂದಿ ಹಾಜರಾಗಿದ್ದು, ಯಾವುದೇ ರೀತಿಯ ಅಹಿತಕರ ಘಟನೆ ನಡೆದರೆ ತಕ್ಷಣದ ಕಾರ್ಯಾಚರಣೆ ಕೈಗೊಳ್ಳಲು ಬೋಟ್ ವ್ಯವಸ್ಥೆ ಕೂಡ ಮಾಡಿಕೊಳ್ಳಲಾಗಿದೆ.