ಚಿಕ್ಕಮಗಳೂರು : ಜಿಲ್ಲೆಯ ಮುಳ್ಳಯ್ಯನಗಿರಿಗೆ ಬರುತ್ತಿರುವ ಪ್ರವಾಸಿಗರು ಚೆಕ್ಪೋಸ್ಟ್ನಲ್ಲಿ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಲು ಹಿಂದೇಟು ಹಾಕಿ ಆರೋಗ್ಯ ಸಿಬ್ಬಂದಿ ಜೊತೆ ಕಿರಿಕ್ ಮಾಡಿಕೊಳ್ಳುತ್ತಿದ್ದಾರೆ.
ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಚಿಕ್ಕಮಗಳೂರಿನಿಂದ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ದತ್ತಪೀಠ ಭಾಗಗಳಿಗೆ ಹೋಗುವ ಪ್ರವಾಸಿಗರಿಗೆ ಕೈಮರ ಚೆಕ್ಪೋಸ್ಟ್ನಲ್ಲಿ ಕೋವಿಡ್ ಟೆಸ್ಟ್ ಮಾಡಿ ಜಿಲ್ಲಾಡಳಿತ ಮುಂದೆ ಬಿಡುತ್ತಿದ್ದರು. ಕೆಲ ಪ್ರವಾಸಿಗರು ರಿಪೋರ್ಟ್ ಜೊತೆಯೇ ಬರುತ್ತಿದ್ದಾರೆ. ಆದರೆ, ಕೆಲ ಪ್ರವಾಸಿಗರು ಪರೀಕ್ಷೆ ಮಾಡಿಸಲು ಹಿಂದೇಟು ಹಾಕುತ್ತಿದ್ದಾರೆ.
ಈಗಾಗಲೇ ಕಳೆದ 10 ದಿನದಲ್ಲಿ ಸುಮಾರು 20 ಪಾಸಿಟಿವ್ ಕೇಸ್ ಬಂದಿವೆ. ಹಾಗಾಗಿ, ಹೆಚ್ಚು ಪರೀಕ್ಷೆ ಮಾಡಲಾಗುತ್ತಿದೆ. ಆದರೆ, ಪ್ರವಾಸಿಗರು ಸ್ಪಂದಿಸದೆ ಸಿಬ್ಬಂದಿ ಜೊತೆ ಜಗಳವಾಡುತ್ತಿದ್ದಾರೆ. ಕೆಲವರು ಪಾಸಿಟಿವ್ ಬಂದ ಮೇಲೆಯೂ ಎರಡು-ಮೂರು ಬಾರಿ ಚೆಕ್ ಮಾಡಿ ನಾವು ಚೆನ್ನಾಗಿದ್ದೇವೆಂದು ಮತ್ತೆ ಕಿರಿಕ್ ಮಾಡುತ್ತಿದ್ದಾರೆ.
ಪಾಸಿಟಿವ್ ಬಂದವರನ್ನ ಹೋಂ ಐಸೋಲೇಷನ್‍ಗೆ ಸೂಚಿಸಲಾಗುತ್ತಿದೆ. ಪೊಲೀಸರು ಕೂಡ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಆರೋಗ್ಯ ಸಿಬ್ಬಂದಿ ಜೊತೆ ಕಿರಿಕ್ ಮಾಡುತ್ತಿರುವ ಪ್ರವಾಸಿಗರಿಗೆ ಸ್ಥಳದಲ್ಲಿಯೇ ಕ್ಲಾಸ್ ತೆಗೆದುಕೊಳುತ್ತಿದ್ದಾರೆ.