ಚಿಕ್ಕಮಗಳೂರು: ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಸರಿಯಾದ ಸಮಯಕ್ಕೆ ಬರಲಿಲ್ಲ. ಮಳೆಯಲ್ಲಿ ಆಶ್ರಯಿಸಿ ಬೆಳೆಯುತ್ತಿದ್ದ ಬೆಳೆಯನ್ನು ರೈತರು ಎಪ್ಪತ್ತರಷ್ಟು ಈಗಾಗಲೇ ಕಳೆದು ಕೊಂಡಿದ್ದಾರೆ. ಇದ್ದಂತಹ ಅಷ್ಟು ಇಷ್ಟು ನೀರಿನಲ್ಲಿ ರೈತರು ತರಕಾರಿ ಬೆಳೆಗಳನ್ನು ಬೆಳೆದಿದ್ದು, ಈಗ ಟೊಮೆಟೊ ದಾಖಲೆಯ ಬೆಲೆಗೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.
ಹೌದು, ಈ ಬಾರಿ ಮುಂಗಾರು ಮಳೆ ರೈತರಿಗೆ ಸರಿಯಾಗಿ ಕೈ ಕೊಟ್ಟಿದೆ. ಸರಿಯಾದ ಸಮಯಕ್ಕೆ ಮಳೆ ಬಾರದ ಹಿನ್ನೆಲೆ ಮಳೆ ಆಶ್ರಹಿಸಿ ಬೆಳೆಯುತ್ತಿದ್ದ ಟೊಮೆಟೊ, ಆಲೂಗಡ್ಡೆ, ಹೂ ಕೋಸು, ಬೀನ್ಸ್, ಬಟಾಣಿ, ಮೆಣಸಿನಕಾಯಿ ಸೇರಿದಂತೆ ಇತರ ತರಕಾರಿ ಬೆಳೆಗಳ ಶೇಕಡಾ 70 ರಷ್ಟು ಭಾಗ ರೈತರು ಈಗಾಗಲೇ ಕಳೆದು ಕೊಂಡಿದ್ದಾರೆ. ಗರಿಷ್ಠ ಪ್ರಮಾಣದಲ್ಲಿ ಬಿತ್ತನೆ ಮಾಡಿದ ತರಕಾರಿ ಬೆಳೆಗಳು ನೀರಿಲ್ಲದೇ ಭೂಮಿಯಲ್ಲಿ ಕರಗಿ ಮಣ್ಣಲ್ಲಿ ಮಣ್ಣಾಗಿ ಹೋಗಿದೆ.
ರೈತರ ಬಳಿ ಇದ್ದ ಅಲ್ಪ ಸ್ವಲ್ಪ ನೀರಿನಲ್ಲಿ ಶೇಕಡಾ 30 ರಷ್ಟು ಬೆಳೆಗಳನ್ನು ಬೆಳೆದಿದ್ದು, ಈಗ ಟೊಮೆಟೊ ಬೆಳೆಗೆ ಚಿಕ್ಕಮಗಳೂರು ಮಾರುಕಟ್ಟೆಯಲ್ಲಿ ಬಾರಿ ಬೆಲೆ ಸಿಗುತ್ತಿದೆ. ಶೇಕಡಾ 100 ರಲ್ಲಿ 70 ರಷ್ಟು ಟೊಮೆಟೊ ಬೆಳೆ ಇಳುವರಿಯಲ್ಲಿ ಕುಂಠಿತವಾಗಿದ್ದು, ಇರುವ ಬೆಳೆಯೇ ದಾಖಲೆ ಪ್ರಮಾಣದ ಬೆಲೆಗೆ ಮಾರಾಟವಾಗುತ್ತಿದೆ.
70ರಷ್ಟು ಬೆಳೆ ಮಳೆ ಇಲ್ಲದೇ ಹಾಳಾಗಿ ಹೋಗಿದ್ದು, ಇರುವ ಬೆಳೆಗೆ ದೊಡ್ಡ ಪ್ರಮಾಣದ ಬೆಲೆ ರೈತರಿಗೆ ಸಿಕ್ಕರು ಅವರಿಗೆ ಇತ್ತ ಲಾಭವು ಇಲ್ಲ, ಅತ್ತ ನಷ್ಟವೂ ಇಲ್ಲ ಎಂಬಂತೆ ಆಗಿದೆ. ಸಾಲ ಸೋಲ ಮಾಡಿ ಬಂಡವಾಳ ಹಾಕಿದ್ದ ರೈತರಿಗೆ ಅಲ್ಪ ಪ್ರಮಾಣದಲ್ಲಿ ಬೆಳೆ ಕೈಗೆ ಬಂದರು ದೊಡ್ಡ ಪ್ರಮಾಣದಲ್ಲಿ ನಷ್ಟ ಅನುಭವಿಸುವಂತಾಗಿದೆ.
ಚಿಕ್ಕಮಗಳೂರಿನ ಎಪಿಎಂಸಿ ಮಾರುಕಟ್ಟೆಗೆ ಪ್ರತಿವರ್ಷ 25 ಸಾವಿರದಿಂದ 30,000 ಟನ್ ಟೊಮೆಟೊ ಬರಬೇಕಿತ್ತು. ಆದರೆ, ಈ ಬಾರಿ ಕೇವಲ ಶೇಕಡಾ 30 ರಷ್ಟು ಟೊಮೆಟೊ ಮಾತ್ರ ಮಾರುಕಟ್ಟೆಗೆ ಬಂದಿದೆ. ಇನ್ನು 70 ರಷ್ಟು ಇಳುವರಿ ಮಳೆಯ ಕಾರಣದಿಂದ ಕುಂಠಿತ ಆಗಿದ್ದು, ಇರುವ ಬೆಳೆ ದಾಖಲೆ ಪ್ರಮಾಣದ ಬೆಲೆಗೆ ಮಾರಾಟವಾಗುತ್ತಿದೆ.
25 ಕೆಜಿ ಟೊಮೆಟೊ 2500 ಸಾವಿರದಿಂದ 3,200 ರೂ ವರೆಗೂ ಮಾರಾಟವಾಗುತ್ತಿದೆ. ಆದರೆ, ಟೊಮೆಟೊ ಮಾತ್ರ ಮಾರುಕಟ್ಟೆಗೆ ಗರಿಷ್ಠ ಮಟ್ಟದಲ್ಲಿ ಬರುತ್ತಿಲ್ಲ. ಇಲ್ಲಿನ ಟೊಮೆಟೊ ರಾಜ್ಯದ ಮೂಲೆ ಮೂಲೆಗೂ ಹೋಗುವುದಲ್ಲದೇ ಅಂತರ್ ರಾಜ್ಯಗಳಿಂದಲೂ ಬೇಡಿಕೆ ಹೆಚ್ಚಿದೆ. ಆದರೆ ಇಲ್ಲಿನ ವ್ಯಾಪಾರಿಗಳಿಗೆ ಟೊಮೆಟೊ ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ.
ಒಟ್ಟಾರೆಯಾಗಿ ಚಿಕ್ಕಮಗಳೂರು ಜಿಲ್ಲೆಯ ಲಕ್ಯ, ಹಳೆ ಲಕ್ಯ, ಸಖರಾಯ ಪಟ್ಟಣ, ದೇವನೂರು, ಹಿರೇಗೌಜ, ಚಿಕ್ಕಗೌಜ, ಕಳಸಾಪುರ, ಬೆಳವಾಡಿ, ಲಕ್ಷ್ಮಿಪುರ ಈ ಭಾಗದಲ್ಲಿ ಅತಿ ಹೆಚ್ಚು ಟೊಮೆಟೊ ಬೆಳೆ ಬೆಳೆಯಲಾಗುತ್ತಿತ್ತು. ಆದರೆ, ಮಳೆ ಕೈ ಕೊಟ್ಟ ಕಾರಣದಿಂದ ಈ ಭಾಗದ ರೈತರು ಹಾಕಿದ್ದ ಬೆಳೆಯನ್ನು ಕಳೆದು ಕೊಂಡಿದ್ದಾರೆ. ಇರುವ ನೀರಿನಲ್ಲಿ ಟೊಮೆಟೊ ಬೆಳೆ ಬೆಳೆದ ರೈತರು ಮಾರುಕಟ್ಟೆಯಲ್ಲಿ ಇರುವ ಬೆಲೆಯಿಂದ ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ.
ಓದಿ: ಟೊಮೆಟೊಗೆ ಕಳ್ಳರ ಕಾಟ: ಹಗಲು-ರಾತ್ರಿ ದೊಣ್ಣೆ ಹಿಡಿದು ತೋಟ ಕಾಯುತ್ತಿರುವ ದಂಪತಿ