ಚಿಕ್ಕಮಗಳೂರು : ಇಂದಿನಿಂದ ಡಿಸೆಂಬರ್ 29ರವರೆಗೆ ಜಿಲ್ಲೆಯ ಗುರುದತ್ತಾತ್ರೇಯ ಸ್ವಾಮಿ ಬಾಬಾ ಬುಡನ್ಗಿರಿ ದರ್ಗಾದಲ್ಲಿ ಸಂಘ ಪರಿವಾರ ಹಮ್ಮಿಕೊಂಡಿರುವ ದತ್ತ ಜಯಂತಿ ಹಿನ್ನೆಲೆ ಇಂದು ನಗರದಲ್ಲಿ ದತ್ತಮಾಲಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ವಿಶ್ವಹಿಂದು ಪರಿಷತ್, ಬಜರಂಗದಳ, ಹಿಂದು ಸಂಘಟನೆ ನೇತೃತ್ವದಲ್ಲಿ ಗುರುದತ್ತಾತ್ರೇಯ ಸ್ವಾಮಿ ಬಾಬಾಬುಡನ್ ಗಿರಿ ದರ್ಗಾದಲ್ಲಿ ಹಮ್ಮಿಕೊಂಡಿರುವ ದತ್ತಜಯಂತಿಗೆ ಪೂರಕವಾಗಿ ಇಂದು ಚಿಕ್ಕಮಗಳೂರು ನಗರದ ಕಾಮಧೇನು ಗಣಪತಿ ದೇವಾಲಯದ ಆವರಣದಲ್ಲಿ ಮಾಜಿ ಸಚಿವ ಸಿ ಟಿ ರವಿ ಸೇರಿದಂತೆ ನೂರಾರು ಭಕ್ತರು ದತ್ತಾತ್ರೇಯ ವಿಗ್ರಹಕ್ಕೆ ಪೂಜೆ ಸಲ್ಲಿಸಿ, ದತ್ತಮಾಲೆ ಧಾರಣೆ ಮಾಡಿದರು. ನಂತರ ಸಾಮೂಹಿಕವಾಗಿ ದತ್ತಭಜನೆ ಮಾಡಿದರು.
ದತ್ತಮಾಲೆ ಧಾರಣೆ ಮಾಡಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ, ಈ ವರ್ಷ ಕೋವಿಡ್ ಇರುವುದರಿಂದ ಸಾಂಪ್ರದಾಯಿಕವಾಗಿ ಆಚರಣೆ ಮಾಡಲಾಗುತ್ತಿದ್ದು, ಪ್ರಮುಖರು ಪಾದುಕೆ ದರ್ಶನ ಮಾಡಲಿದ್ದಾರೆ. ನಾನು ಎರಡು ದಶಕಗಳಿಂದ ದತ್ತಮಾಲೆ ಧಾರಣೆ ಮಾಡುತ್ತಿದ್ದೇನೆ. ಕೊರೊನಾ ಸಮಸ್ಯೆ ದೂರವಾಗಬೇಕು, ಜನರಿಗೆ ಉತ್ತಮ ಆರೋಗ್ಯ ಸಿಗಬೇಕು, ಭಾರತ ಹೆಚ್ಚು ಶಕ್ತಿಶಾಲಿ ದೇಶವಾಗಬೇಕು ಎಂದು ಪ್ರಾರ್ಥನೆ ಮಾಡಿದ್ದೇನೆ. ರಾಮ ಮಂದಿರದ ವಿಚಾರವೂ ನ್ಯಾಯಾಲಯದ ಮೂಲಕ ಬಗೆಹರಿದಿದೆ ಎಂದು ಹೇಳಿದರು.
ಈ ಕುರಿತು ಮಾತನಾಡಿದ ಬಜರಂಗದಳದ ಮುಖಂಡರು, ಪ್ರತಿ ವರ್ಷದಂತೆ ಈ ವರ್ಷವು ದತ್ತ ಜಯಂತಿ ಕಾರ್ಯಕ್ರಮ ಮಾಡುತ್ತಿದ್ದು, 27ರಂದು ಅನುಸೂಯ ಮಾತೆ ಪೂಜೆ, 28 ರಂದು ಸಾಂಕೇತಿಕವಾಗಿ ಸಂಕೀರ್ತನಾ ಯಾತ್ರೆ, 29ರಂದು ದತ್ತ ಪಾದುಕೆ ದರ್ಶನ ಮಾಡಲಿದ್ದಾರೆ. ಈ ಬಾರಿಯೂ ಅನೇಕ ಬೇಡಿಕೆಗಳಿದ್ದು, ಈಗಾಗಲೇ ಮುಖ್ಯಮಂತ್ರಿಗಳ ಭೇಟಿಗಾಗಿ ಪ್ರಯತ್ನ ಮಾಡುತ್ತಿದ್ದೇವೆ. ನ್ಯಾ. ನಾಗಮೋಹನ್ ದಾಸ್ ವರದಿ ತಿರಸ್ಕಾರ ಮಾಡಬೇಕು. ತ್ರಿಕಾಲ ಪೂಜೆ ನಡೆಯಬೇಕು ಹಾಗೂ ಹಿಂದೂ ಆರ್ಚಕರ ನೇಮಕವಾಗಬೇಕು ಎಂದು ತಿಳಿಸಿದರು.