ಚಿಕ್ಕಮಗಳೂರು: ವಿಷ ಸೇವಿಸಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕೊಪ್ಪ ತಾಲೂಕಿನ ಸಿಗದಾಳು ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಬಾಬಣ್ಣ (55) ಶೈಲ (32) 11 ವರ್ಷದ ಬಾಲಕಿ ಆತ್ಮಹತ್ಯೆಗೆ ಯತ್ನಿಸಿದವರು. ಇವರೆಲ್ಲರೂ ಉತ್ತಮೇಶ್ವರ ಗ್ರಾಮದ ನಿವಾಸಿಗಳಾಗಿದ್ದು, ಆತ್ಮಹತ್ಯೆಗೆ ಮುಂದಾಗಿದ್ದು ಏಕೆ ಎಂಬುದರ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ.
ಸಿಗದಾಳು ಅರಣ್ಯ ಪ್ರದೇಶದಲ್ಲಿ ವಿಷ ಸೇವಿಸಿ ಕೆಳಗೆ ಬಿದ್ದು ಮೂವರು ನರಳಾಡುತ್ತಿದ್ದರು. ಅರಣ್ಯ ಪ್ರದೇಶದಲ್ಲಿ ಹೋಗುತ್ತಿದ್ದ ಕೆಲ ಸ್ಥಳೀಯರು ಇದನ್ನು ಗಮನಿಸಿ, ಕೂಡಲೇ ಪಕ್ಕದ ಗ್ರಾಮದ ನಿವಾಸಿಗಳಿಗೆ ಹಾಗೂ ಹರಿಹರಪುರ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ.
ಕೂಡಲೇ ಸ್ಥಳಕ್ಕಾಗಮಿಸಿದ ಹರಿಹರಪುರ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಸ್ಥಳೀಯರು ಅವರನ್ನು ಅರಣ್ಯದಿಂದ ಹೊರ ತಂದು ಉಳಿಸುವ ಪ್ರಯತ್ನ ಮಾಡಿದ್ದಾರೆ. ವಿಷ ಸೇವಿಸಿ ಸುಸ್ತಾಗಿ ಬಿದ್ದಿದ್ದ ಈ ಮೂರು ಜನರಿಗೆ, ಸ್ಥಳೀಯರು ನೀರು ಕುಡಿಸಿ ಪ್ರಾಣ ಉಳಿಸುವ ಕೆಲಸ ಮಾಡಿದ್ದಾರೆ. ಅಸ್ವಸ್ಥರನ್ನು ಕೂಡಲೇ ಕೊಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಮೂವರ ಪರಿಸ್ಥಿತಿ ಗಂಭೀರವಾದ ಹಿನ್ನೆಲೆ, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ಗೆ ರವಾನಿಸಿದ್ದಾರೆ. ಹರಿಹರಪುರದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಈ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.