ಚಿಕ್ಕಮಗಳೂರು: ಬದಲಾವಣೆ ಜಗದ ನಿಯಮ. ಬದಲಾದರೆ ದೊರೆಯುವುದು ಹೊಸ ಆಯಾಮ. ತಂತ್ರಜ್ಞಾನದ ವಿಷಯದಲ್ಲಿ ಬದಲಾವಣೆಯದ್ದು ಅತಿ ವೇಗವಾಗಿ ಸಾಗುತ್ತಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಆಗುತ್ತಿರುವ ಪ್ರಗತಿಯ ಜತೆಜತೆಗೆ ಟೆಲಿವಿಷನ್ಗಳು ಕೂಡ ಕಾಲಕ್ಕೆ ತಕ್ಕಂತೆ ಬದಲಾಗತೊಡಗಿವೆ. ಎಲ್‌ಸಿಡಿ, ಪ್ಲಾಸ್ಮಾ ಮತ್ತು ಎಲ್ಇಡಿ ಸ್ಕ್ರೀನ್‌ಗಳು ಬಂದಿವೆ. ಆದರೆ, ಈ ಒಂದು ಹಳ್ಳಿಯನ್ನು ಒಂದೇ ಒಂದು ಟಿವಿ ಇಲ್ಲಿನವರನ್ನು ಬಳ್ಳಿಯಂತೆ ಬೆಸೆದು ಕೂರಿಸಿದೆ ಎಂಬುದು 5ಜಿ ಕಾಲದಲ್ಲೂ ಇದು ಸಾಧ್ಯವೇ ಎಂಬ ಶಂಕೆ ಮೂಡುತ್ತದೆ.
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡ ಭಾಗದಲ್ಲಿ ಅದೆಷ್ಟೋ ಕುಗ್ರಾಮಗಳಿವೆ. ಕೆಲವು ಗ್ರಾಮಗಳಿಗೆ ಸರಿಯಾದ ವಿದ್ಯುತ್ ಸಂಪರ್ಕ ಇಲ್ಲ. ಇಲ್ಲಿನ ಜನರಿಗೆ ಇರಲೂ ಸರಿಯಾದ ಸೂರಿಲ್ಲ. ಮತ್ತೊಂದು ಕಡೆ ಭಾರತದ ಪ್ರತಿ ಗ್ರಾಮ ಪಂಚಾಯಿತಿಗೆ ಆಪ್ಟಿಕಲ್ ಫೈಬರ್, ಬ್ರಾಡ್ ಬಾಂಡ್ ಸಂಪರ್ಕ ಕಲ್ಪಿಸುವ ಬಗ್ಗೆ ಸರ್ಕಾರಗಳು ಮಾತನಾಡುತ್ತಿವೆ. ಈ ಎಲ್ಲಾ ಬೆಳವಣಿಗೆಯ ನಡುವೆಯೂ ಮೂಡಿಗೆರೆ ತಾಲೂಕಿನ ಕುದುರೆ ಮುಖದ ಗೋಪಾಲ ಕಾಲೋನಿಯಲ್ಲಿ 50ಕ್ಕೂ ಹೆಚ್ಚು ಕುಟುಂಬಗಳು ಮಾಹಿತಿ ಹಾಗೂ ಮನೋರಂಜನೆಗೆ ಒಂದು ಟಿವಿಯನ್ನು ಆಶ್ರಯಿಸಿವೆ. ಇಲ್ಲಿ 200ಕ್ಕೂ ಅಧಿಕ ಜನರು ನೆಲೆಸಿದ್ದಾರೆ. ಆದರೆ ಇಡೀ ಗ್ರಾಮಕ್ಕೆ ಜಗತ್ತಿನ ವಿದ್ಯಮಾನಗಳು ತಿಳಿಯುವುದು ಇರುವ ಒಂದೇ ಒಂದು ಟಿವಿಯಲ್ಲಿ ಮಾತ್ರವೇ. ಈ ಟಿವಿಯನ್ನು ಎಲ್ಲರೂ ಒಗ್ಗೂಡಿ ವೀಕ್ಷಣೆ ಮಾಡುತ್ತಾರೆ. ಈ ಟಿವಿ ಇಲ್ಲಿನವರ ಸಹಬಾಳ್ವೆಯ ಪ್ರತಿರೂಪವಾಗಿದೆ.
ಮಲೆನಾಡಿನ ಹಸಿರ ಸಿರಿಯ ನಡುವೆ ವಿದ್ಯುತ್ ಕಣ್ಣಾಮುಚ್ಚಾಲೆ ಸಾಮಾನ್ಯ ಸಂಗತಿ. ಇದರ ನಡುವೆಯೂ ಇಲ್ಲಿನವರೆಲ್ಲಾ ಇರುವ ಆ ಒಂದು ಟಿವಿಯನ್ನು ವಿದ್ಯುತ್ ಬಂದಾಗ ಕುಳಿತು ವೀಕ್ಷಣೆ ಮಾಡುತ್ತಾರೆ. ಈ ಪ್ರದೇಶದಲ್ಲಿ ಸಂಜೆ ವಿದ್ಯುತ್ ಬಂದರೆ ಬೆಳಗ್ಗೆವರೆಗೂ ಮಾತ್ರ ಇರುತ್ತದೆ. ಹಗಲಲ್ಲಿ ವಿದ್ಯುತ್ ಬೆಳಕು ಹೇಗಿರಬಹುದು ಎಂಬುದನ್ನು ಇಲ್ಲಿನವರಿಗೆ ನೋಡುವುದಕ್ಕೂ ಸಿಗಲ್ಲ. ಇರುವ ವಿದ್ಯುತ್ ಅನ್ನು ಗ್ರಾಮದಲ್ಲಿರುವ ಸಮುದಾಯ ಭವನಕ್ಕೆ ಸಂಪರ್ಕ ಕಲ್ಪಿಸಿಕೊಂಡಿದ್ದಾರೆ.
ನಾಲ್ಕಾರು ಸದಸ್ಯರು ಇರುವ ಚಿಕ್ಕ ಕುಟುಂಬದಲ್ಲಿ ಬರುವ ನೂರಾರು ಚಾನಲ್ಗಳ ಭರಾಟೆ ನಡುವೆ ಒಬ್ಬೊಬ್ಬರಿಗೆ ಒಂದು ಮನೋರಂಜನೆಯ ಪ್ರೋಗ್ರಾಂ ಇಷ್ಟವಿರುತ್ತದೆ. ಒಂದು ಕುಟುಂಬಸ್ಥರ ನಡುವೆ ಚಾನಲ್ ವೀಕ್ಷಣೆಗೆ ಕೆಲವೊಮ್ಮೆ ಭಿನ್ನಾಭಿಪ್ರಾಯ ಮೂಡುತ್ತವೆ. ಒಂದು ಹಳ್ಳಿಯ ಹತ್ತಾರು ಕುಟುಂಬಗಳಲ್ಲಿನ ಭಿನ್ನ ಅಭಿರುಚಿ, ಆಲೋಚನೆ, ಚಿಂತನೆ ಇರುವ ನೂರಾರು ಜನರು ಒಂದು ಟಿವಿಯಲ್ಲಿ ಒಂದೇ ಪ್ರೋಗ್ರಾಂ ನೋಡುವುದು ಹೇಗೆ ಸಾಧ್ಯ? ಮೊಬೈಲ್ ಜಮಾನದಲ್ಲಿ ತಮ್ಮಿಷ್ಟದ ಸಿನಿಮಾ, ಶೋ, ವೆಬ್ ಸಿರೀಸ್ ನೋಡುವ ಡಿಜಿಟಲ್ ತಂತ್ರಜ್ಞಾನ ಹೊಂದಿರುವವಿಗೆ ಇದೊಂದು ಅಚ್ಚರಿಯಾದರು ಅತಿಶಯವಲ್ಲ.
ಟಿವಿ ವೀಕ್ಷಣೆಯ ವೇಳೆ ಒಂದು ದಿನವೂ ಇವರ ಮಧ್ಯೆ ಜಗಳ ಆಗಿಲ್ಲ. ಚಾನಲ್ ಬದಲಾಯಿಸಲು ರಿಮೋಟ್ಗಾಗಿ ಕಿತ್ತಾಡಿದ ನಿದರ್ಶನಗಳು ಇಲ್ಲ. ಏಕೆಂದರೇ ಒಬ್ಬೊಬ್ಬೊರದ್ದು ಬೇರೆಯದೇ ಅಭಿರುಚಿ ಇದ್ದರೂ ಮತ್ತೊಬ್ಬರು ನೋಡುತ್ತಿರುವ ಪ್ರೋಗ್ರಾಂಗೆ ಭಂಗ ತರುವಂತಿಲ್ಲ. 'ನಾನು ಅದು ನೋಡಬೇಕು, ಇದು ನೋಡಬೇಕು, ನಾನು ಬೇರೆ ಮತ್ತೊಂದು ನೋಡಬೇಕು' ಎಂಬುದು ನಿಷೇಧ. ಹಿರಿಯರು ಯಾವುದು ನೋಡುತ್ತಾರೋ ಅದನ್ನೇ ಉಳಿದವರೂ ಕುಳಿತು ನೋಡಬೇಕು.
ಆಗಾಗ ಕೈಕೊಡುವ ವಿದ್ಯುತ್ನಲ್ಲಿ ಟಿವಿ ನೋಡಬೇಕು. ತಮ್ಮ ಮೊಬೈಲ್ ಚಾರ್ಜ್ ಕೂಡ ಇಲ್ಲೇ ಮಾಡಿಕೊಳ್ಳಬೇಕು. ಹಲವು ವರ್ಷಗಳಿಂದ ಈ ಗ್ರಾಮದ ಜನರ ಈ ಗೋಳು ಮುಗಿಯದಾಗಿದೆ. ಈ ಗ್ರಾಮದ ಜನರೆಲ್ಲಾ ಕುದುರೆ ಮುಖದ ಕಬ್ಬಿಣ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕಂಪನಿ ಮುಚ್ಚಿದ ಬಳಿಕ ಕೆಲಸ ಹುಡಿಕೊಂಡು ಕೆಲವರು ಬೇರೆ- ಬೇರೆ ಕಡೆ ತೆರಳಿದರು. ಉಳಿದವು ಇಲ್ಲೇ ಉಳಿದುಕೊಂಡು ವಾಸವಾಗಿದ್ದಾರೆ. ತಮ್ಮ ಮಕ್ಕಳ ವಿದ್ಯಾಭ್ಯಾಸ ಹಾಗೂ ಭವಿಷ್ಯದ ಹಾದಿಹಿಡಿದು ಬೇರೆ ಕಡೆ ಹೋಗಿದ್ದಾರೆ. ಆದರೆ, ಬಹುತೇಕರು ಇನ್ನೂ ಇಲ್ಲಿಯೇ ಉಳಿದುಕೊಂಡಿದ್ದಾರೆ.
ಮೂಡಿಗೆರೆ ತಾಲೂಕಿನ ಕುದುರೆ ಮುಖದಲ್ಲಿ ವರ್ಷದಲ್ಲಿ ನಾಲ್ಕು ತಿಂಗಳು ನಿರಂತರ ಮಳೆ ಸುರಿಯುತ್ತದೆ. ಮೂಲಭೂತ ಸೌಲಭ್ಯಕ್ಕಾಗಿ ಸರ್ಕಾರಕ್ಕೆ ಹಲವು ವರ್ಷಗಳಿಂದ ಮನವಿ ಮಾಡುತ್ತಿದ್ದರು ರಾಜಧಾನಿಯ ನಾಯಕರಿಗೆ ಇವರ ಧ್ವನಿ ಕೇಳಿಸುತ್ತಿಲ್ಲ. ಇವರು ಇನ್ನೂ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಲ್ಲ. ಶಾಸಕರು, ಸಂಸದರು, ಸ್ಥಳೀಯ ಜನಪ್ರತಿನಿಧಿಗಳಾಗಲ್ಲಿ ಇಲ್ಲಿನ ಅಭಿವೃದ್ಧಿಯ ಬಗ್ಗೆ ಕಿಂಚಿತ್ತು ಕಾಳಜಿ ತೋರಿಲ್ಲ ಎಂಬುದು ಇವರ ಅಂಬೋಣ.