ಚಿಕ್ಕಮಗಳೂರು: ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರ ಕಚೇರಿಯಲ್ಲಿ ಕಳ್ಳತನ ನಡೆದಿದೆ. ಜಾರ್ಜ್ ಖಾಸಗಿ ಆಪ್ತ ಸಹಾಯಕ ಮೋಗಣ್ಣ ಅವರ ಬಳಿ ಇದ್ದ ಕೆಲವು ಫೈಲ್‍ಗಳು, 15 ಸಾವಿರ ಹಣ ಕಳ್ಳತನವಾಗಿವೆ. ಕೆ.ಜೆ.ಜಾರ್ಜ್ ಅವರು ನಗರದ ಪ್ರವಾಸಿ ಮಂದಿರದಲ್ಲೇ ಒಂದು ಕೊಠಡಿಯನ್ನು ಕಚೇರಿ ಮಾಡಿಕೊಂಡಿದ್ದಾರೆ.
ಸರ್ಕಾರದಿಂದ ಕೊಟ್ಟಿರುವ ಆಪ್ತ ಸಹಾಯಕರ ಜೊತೆ ಸಚಿವ ಜಾರ್ಜ್ ಅವರೊಂದಿಗಿನ ಇಬ್ಬರು ಆಪ್ತ ಸಹಾಯಕರು ಇದೇ ಕಚೇರಿಯಲ್ಲಿದ್ದಾರೆ. ಎರಡು ದಿನದ ಹಿಂದೆ ಕಚೇರಿಯಲ್ಲಿ ಬ್ಯಾಗ್ ಇಟ್ಟು ಹೊರಗಡೆ ಹೋಗಿ ಬರುವಷ್ಟರಲ್ಲಿ ನಾಪತ್ತೆಯಾಗಿದೆ. ಪ್ರವಾಸಿ ಮಂದಿರದಲ್ಲಿ ಸಿಸಿ ಕ್ಯಾಮರಾಗಳು ಇಲ್ಲದ ಕಾರಣ ಖದೀಮರ ಪತ್ತೆಗೆ ಸಮಸ್ಯೆಯಾಗಿದೆ. ದಾಖಲೆ ಹಾಗೂ ಹಣ ಕಳುವಾದ ಹಿನ್ನೆಲೆಯಲ್ಲಿ ಮೊಗಣ್ಣ ಅವರು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರುವ ನಗರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಜಾರ್ಜ್ ವಿರುದ್ಧ ದುರುದ್ದೇಶಪೂರಿತ ಪೋಸ್ಟ್, ಐಟಿ ಸೆಲ್ ಉದ್ಯೋಗಿ ಬಂಧನ: ಮತ್ತೊಂದೆಡೆ, ತೆಲಂಗಾಣ ವಿಧಾನಸಭೆ ಚುನಾವಣೆ ವೇಳೆ ಕೆ.ಜೆ.ಜಾರ್ಜ್ ಅವರ ವಿರುದ್ಧ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ದುರುದ್ದೇಶಪೂರಿತ ಪೋಸ್ಟ್ ಮಾಡಿದ್ದ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಪಾರ್ಟಿಯ ಐಟಿ ಸೆಲ್ ಉದ್ಯೋಗಿಯನ್ನು ಶಿವಾಜಿನಗರ ಪೊಲೀಸ್ ಠಾಣೆಯ ಸೈಬರ್, ಆರ್ಥಿಕ ಅಪರಾಧಗಳು ಮತ್ತು ನಾರ್ಕೋಟಿಕ್ಸ್ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ರವಿಕಾಂತಿ ಶರ್ಮಾ ಬಂಧಿತ ಆರೋಪಿ.
ತೆಲಗು ಸ್ಕೈರ್ಬ್ ಎಂಬ 'ಎಕ್ಸ್' ಖಾತೆಯಲ್ಲಿ ಇಂಧನ ಸಚಿವರ ವಿರುದ್ಧ ವಿಡಿಯೋ ಪೋಸ್ಟ್ ಮಾಡಿದ್ದವರ ವಿರುದ್ಧ ಬೆಸ್ಕಾಂ ಜನರಲ್ ಮ್ಯಾನೇಜರ್ (ಎ ಮತ್ತು ಹೆಚ್ಆರ್) ಶಿವಾಜಿನಗರ ಸೈಬರ್ ಪೊಲೀಸ್ ಠಾಣೆಗೆ ಕಳೆದ ನವೆಂಬರ್ 28ರಂದು ದೂರು ಸಲ್ಲಿಸಿದ್ದರು. ಇದರನ್ವಯ ತನಿಖೆ ನಡೆಸಿದ ಶಿವಾಜಿನಗರ ಪೊಲೀಸರು ಆರೋಪಿಯನ್ನು ಬುಧವಾರ ಸೆರೆಹಿಡಿದಿದ್ದಾರೆ.
ಪ್ರಕರಣ ಸಂಬಂಧ ಬಿಆರ್‌ಎಸ್ ಪಕ್ಷದ ಸಕ್ರಿಯ ಕಾರ್ಯಕರ್ತ, ಪಕ್ಷದ ಐಟಿ ಸೆಲ್ ಉದ್ಯೋಗಿ ಕರೀಂನಗರ ನಿವಾಸಿ ರವಿಕಾಂತಿ ಶರ್ಮಾನನ್ನು (33) ಬಂಧಿಸಿ ವಿಚಾರಣೆ ನಡೆಸಿದಾಗ ಆರೋಪಿಯ ತಂದೆ, ತಾಯಿ ಕೂಡ ಬಿಆರ್‌ಎಸ್ ಪಕ್ಷದ ಮಾಜಿ ಕಾರ್ಪೊರೇಟರ್‌ಗಳಾಗಿದ್ದಾರೆ ಎಂದು ಶಿವಾಜಿನಗರ ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯದ ವಿದ್ಯುತ್ ಪರಿಸ್ಥಿತಿ ಮತ್ತು ಗೃಹ ಜ್ಯೋತಿ ಯೋಜನೆಯ ಅನುಷ್ಠಾನದ ಕುರಿತು ಆರೋಪಿ ರವಿಕಾಂತಿ ಶರ್ಮಾ, ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಜಾರ್ಜ್ ಅವರ ನಕಲಿ ಆಡಿಯೋ ಕ್ಲಿಪ್ ಪ್ರಸಾರ ಮಾಡಿದ್ದ. ಈ ಬಗ್ಗೆ 'ಎಕ್ಸ್'ನ ಕಾನೂನು ಜಾರಿ ವಿಭಾಗದಿಂದ ಮಾಹಿತಿ ಪಡೆದು ಪೊಲೀಸರು ತನಿಖೆ ಆರಂಭಿಸಿದ್ದರು. ಎಕ್ಸ್ ಖಾತೆಗೆ ಬಳಸಲಾದ ಮೊಬೈಲ್ ಸಂಖ್ಯೆ ರವಿಕಾಂತಿ ಶರ್ಮಾ ಅವರ ತಂದೆಯ ಹೆಸರಿನಲ್ಲಿದೆ ಎಂದು ತಿಳಿದುಬಂದಿದೆ. ಶಿವಾಜಿನಗರ ಸೈಬರ್ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಎಸ್.ಎಂ.ಉಮೇಶ್ ಕುಮಾರ್ ಮತ್ತು ತಂಡದವರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ: ಸಿ.ಪಿ.ಯೋಗೇಶ್ವರ್ ಭಾವ ಮಹದೇವಯ್ಯ ಕೊಲೆ ಪ್ರಕರಣ: ಓರ್ವನ ಬಂಧನ; ಹಣಕ್ಕಾಗಿ ಕೃತ್ಯ?