ಚಿಕ್ಕಮಗಳೂರು: ಮಾಜಿ ಸಚಿವ ರಾಜಕೀಯ ಮುತ್ಸದ್ದಿ 87 ವರ್ಷದ ಡಿ.ಬಿ ಚಂದ್ರೇಗೌಡ ವಯೋ ಸಹಜ ಅನಾರೋಗ್ಯದಿಂದ ಸ್ವಗ್ರಾಮದಲ್ಲಿ ಮೃತಪಟ್ಟಿದ್ದು, ರಾಜಕೀಯ ಮುಖಂಡರು ಸೇರಿದಂತೆ ಸಾವಿರಾರು ಅಭಿಮಾನಿಗಳು, ಗ್ರಾಮಸ್ಥರು ಅಂತಿಮ ದರ್ಶನ ಪಡೆದರು. ನಾಳೆ ಚಂದ್ರೇಗೌಡರ ಹುಟ್ಟೂರು ದಾರದಹಳ್ಳಿ ಗ್ರಾಮದ ಪೂರ್ಣಚಂದ್ರ ಎಸ್ಟೇಟ್ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ಚಿಕ್ಕಮಗಳೂರು ಕ್ಷೇತ್ರದಿಂದ 1978ರಲ್ಲಿ ಇಂದಿರಾಗಾಂಧಿ ಗೆಲುವಿಗೆ ನೆರವಾಗಿದ್ದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದಾರದಹಳ್ಳಿ ಗ್ರಾಮದ ಹಿರಿಯ ರಾಜಕಾರಣಿ , ಮಾಜಿ ಸಚಿವ ಡಿ.ವಿ ಚಂದ್ರೇಗೌಡ ತಮ್ಮ ಸ್ವಗ್ರಾಮ ಪೂರ್ಣಚಂದ್ರ ಎಸ್ಟೇಟ್ನಲ್ಲಿ ವಯೋ ಸಹಜ ಅನಾರೋಗ್ಯದಿಂದ ನಿಧನರಾದರು. ರಾಜಕೀಯ ನಾಯಕರು ಸೇರಿದಂತೆ ಸಾವಿರಾರು ಅಭಿಮಾನಿಗಳು, ಗ್ರಾಮಸ್ಥರು, ಕುಟುಂಬಸ್ಥರು ಕಂಬನಿ ಮಿಡಿದಿದ್ದಾರೆ. ತಮ್ಮ ರಾಜಕೀಯ ಬದುಕಿನಲ್ಲಿ ದಶಕಗಳ ಕಾಲ ತಮ್ಮದೇ ಹೆಸರನ್ನು ಸಂಪಾದಿಸಿ ಕೊಂಡಿದ್ದ ಚಂದ್ರೇಗೌಡರು ಮೂರು ಬಾರಿ ಶಾಸಕರಾಗಿ, ಮೂರು ಬಾರಿ ಸಂಸದರಾಗಿದ್ದು ಜೊತೆಗೆ ಲೋಕಸಭೆ, ವಿಧಾನಸಭೆ, ರಾಜ್ಯಸಭೆ, ವಿಧಾನ ಪರಿಷತ್ಗೆ ಆಯ್ಕೆಯಾಗಿ ವಿಶೇಷ ಸಾಧನೆ ಮಾಡಿದ ಖ್ಯಾತಿ ಇವರಿಗಿದೆ.
ಮೂಡಿಗೆರೆ ತಾಲೂಕಿನ ದಾರದ ಹಳ್ಳಿ ಗ್ರಾಮದ ಬೈರೇಗೌಡ, ಪುಟ್ಟಮ್ಮ ದಂಪತಿಗಳ ಮಗನಾಗಿ ಆಗಸ್ಟ್ 26-1936 ರಲ್ಲಿ ಜನಿಸಿದ್ದ ಚಂದ್ರೇಗೌಡರು, ವೃತ್ತಿಯಲ್ಲಿ ವಕೀಲರಾಗಿ ಸೇವೆ ಸಲ್ಲಿಸಿ ರಾಜಕೀಯಕ್ಕೆ ಎಂಟ್ರಿ ನೀಡಿದ್ದರು. ಚಿಕ್ಕಮಗಳೂರು ಸಂಸದರಾಗಿ ಆಯ್ಕೆಯಾಗಿ, ಇಂದಿರಾ ಗಾಂಧಿಗಾಗಿ ಸಂಸದ ಸ್ಥಾನ ತ್ಯಾಗ ಮಾಡಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದರು.
ಇಂದು ಸ್ವ-ಗ್ರಾಮದ ಜೊತೆಗೆ ಮೂಡಿಗೆರೆಯ ಅಂಡ್ಯಾತಯ ರಂಗ ಮಂದಿರದಲ್ಲಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ , ಮಾಜಿ ಸಚಿವೆ ಮೊಟಮ್ಮ, ಮಾಜಿ ಶಾಸಕ ವಿಶ್ವನಾಥ್ ಸೇರಿದಂತೆ ಹಲವು ಗಣ್ಯರು ಚಂದ್ರೇಗೌಡರ ಅಂತಿಮ ದರ್ಶನ ಪಡೆದು, ಬಿಜೆಪಿ ಪಕ್ಷದ ಪರವಾಗಿ ಪಕ್ಷದ ಬಾವುಟ ಹೊದಿಸಿ ಗೌರವ ಸಲ್ಲಿಸಿದರು. ಇನ್ನು ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜ್ಯ ನಾಯಕರು ಅಂತಿಮ ದರ್ಶನ ಪಡೆಯುವ ಸಾಧ್ಯತೆ ಇದೆ.
ನಾಲ್ಕು ದಶಕಗಳ ಕಾಲ ರಾಜಕೀಯದಲ್ಲಿ ತನ್ನದೇ ಛಾಪು ಮೂಡಿಸಿಕೊಂಡಿದ್ದ ಡಿ.ಬಿ ಚಂದ್ರೇಗೌಡರು, ನಾಲ್ವರು ಹೆಣ್ಣು ಮಕ್ಕಳು ಹಾಗೂ ಪತ್ನಿಯನ್ನು ಅಗಲಿದ್ದಾರೆ. ಈಗಾಗಲೇ ಮೂಡಿಗೆರೆ ತಾಲೂಕಿನ ದಾರದಹಳ್ಳಿ ಗ್ರಾಮದ ಪೂರ್ಣಚಂದ್ರ ಎಸ್ಟೇಟ್ನಲ್ಲಿ ಅಂತ್ಯ ಕ್ರಿಯೆಗೆ ಸಿದ್ದತೆ ಮಾಡಿಕೊಳ್ಳಲಾಗಿದೆ.
ಇದನ್ನೂ ಓದಿ: ನಾಲ್ಕೂ ಸದನಗಳಲ್ಲಿ ಕಾರ್ಯ, ಇಂದಿರಾ ಗಾಂಧಿಗಾಗಿ ಸ್ಥಾನ ಬಿಟ್ಟುಕೊಟ್ಟಿದ್ದ ರಾಜಕಾರಣಿ ಚಂದ್ರೇಗೌಡ