ಚಿಕ್ಕಮಗಳೂರು: ಸಂತಾನ ಹರಣ ಚಿಕಿತ್ಸೆ ಮಾಡುವ ಬದಲು, ಕಂಠ ಪೂರ್ತಿ ಕುಡಿದು ಬಂದು ಆಪರೇಷನ್ ಥಿಯೇಟರ್‌ನಲ್ಲಿ ಮಲಗಿದ್ದ ವೈದ್ಯನನ್ನು, ರೋಗಿಗಳು ಹಾಗೂ ರೋಗಿಗಳ ಸಂಬಂಧಿಕರು ನೋಡಿ ಬೆಚ್ಚಿ ಬಿದ್ದಿದ್ದಾರೆ. ವೈದ್ಯನ ಅವಾಂತರ ನೋಡಿ ರೋಗಿಗಳು ಹಣೆ ಹಣೆ ಚಚ್ಚಿ ಕೊಂಡು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಎಣ್ಣೆ ಏಟಿನಲ್ಲಿದ್ದ ವೈದ್ಯನನ್ನು ನೋಡಿ ಜನರು ದಂಗಾಗಿ ಹೋಗಿದ್ದಾರೆ. ಕಳಸ ಸರ್ಕಾರಿ ಆಸ್ಪತ್ರೆಯಲ್ಲಿ ಸಂತಾನ ಹರಣ ಕ್ಯಾಂಪ್ ಏರ್ಪಾಡು ಮಾಡಲಾಗಿತ್ತು. ಸಂತಾನ ಹರಣ ಶಸ್ತ್ರಚಿಕಿತ್ಸೆ ಪಡೆಯುವ ಮಹಿಳೆಯರಿಗೆ ಬುಧವಾರ ಬೆಳಗ್ಗೆ 8 ಗಂಟೆಗೆ ಬರಲು ಆಸ್ಪತ್ರೆಯ ವೈದ್ಯರು ಹೇಳಿದ್ದರು. ಕ್ಯಾಂಪ್‌ಗೆ 9ಕ್ಕೂ ಹೆಚ್ಚು ಮಹಿಳೆಯರು ತಮ್ಮ ಮಕ್ಕಳನ್ನು ಬಿಟ್ಟು ಹೇಳಿದ ಸಮಯಕ್ಕೆ ಬಂದಿದ್ದರು. ಆಪರೇಷನ್ ಮಾಡುವ ಸಲುವಾಗಿ ಕಳಸಾ ಸರ್ಕಾರಿ ಆಸ್ಪತ್ರೆ ವೈದ್ಯ ಬಾಲಕೃಷ್ಣ 3 ಗಂಟೆಗೆ ಬಂದಿದ್ದರು. ಬರುವಾಗ ಫುಲ್ ಟೈಟ್ ಆಗಿದ್ದ ವೈದ್ಯ ಸಂತಾನಹರಣ ಚಿಕಿತ್ಸೆ ಮಾಡಬೇಕಾದ ಆಪರೇಷನ್ ಬೆಡ್ ಮೇಲೆ ಹೋಗಿ ಮಲಗಿಕೊಂಡಿದ್ದಾನೆ.
ಆರೋಗ್ಯ ಸಿಬ್ಬಂದಿಯ ಹೈಡ್ರಾಮಾ: ಇದರಿಂದ ಅರಿವಳಿಕೆ ಮದ್ದು ತೆಗೆದುಕೊಂಡು ಮಲಗಿದ್ದ ಮಹಿಳೆಯರ ಸಂಬಂಧಿಕರು ಆಕ್ರೋಶಗೊಂಡಿದ್ದಾರೆ. ಈ ವೇಳೆ ಆಸ್ಪತ್ರೆ ವೈದ್ಯನಿಗೆ ಏನೋ ಆಗಿದೆ ಎಂದು ಸಿಬ್ಬಂದಿ ಭಾವಿಸಿದ್ದರು. ಶುಗರ್ ಕಡಿಮೆ ಆಗಿದೆ. ಬಿಪಿ ಜಾಸ್ತಿ ಆಗಿದೆ ಎಂದು ಸಿಬ್ಬಂದಿ ಹೈಡ್ರಾಮಾ ಮಾಡಿದ್ದಾರೆ. ಅಲ್ಲದೇ ವೈದ್ಯರಿಗೆ ಗ್ಲೂಕೋಸ್ ಹಾಕಿಸಿ ಕುಡಿದ ಮತ್ತಿನಲ್ಲಿದ್ದ ವೈದ್ಯ ಬಾಲಕೃಷ್ಣ ಅವರನ್ನು ವಾಪಸ್ ಕೊಪ್ಪಕ್ಕೆ ಕಳುಹಿಸಲಾಯಿತು. ಅರಿವಳಿಕೆ ಮದ್ದು ತೆಗೆದುಕೊಂಡು ಮಲಗಿದ್ದ ಮಹಿಳೆಯರಿಗೂ ಆಸ್ಪತ್ರೆ ಸಿಬ್ಬಂದಿ ಗ್ಲುಕೋಸ್ ಹಾಕಿದ್ದಾರೆ. ಗುರುವಾರ ಮತ್ತೆ ಬೇರೆ ವೈದ್ಯರನ್ನು ಕರೆಸಿ ಆಪರೇಷನ್ ಮಾಡಿಸಲು ಸಿದ್ಧತೆ ನಡೆಸಲಾತ್ತಿದೆ ಎಂದು ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದರು ಎಂದು ರೋಗಿಯ ಸಂಬಂಧಿ ಅವಿನಾಶ್ ತಿಳಿಸಿದರು.
ವೈದ್ಯ ರೋಗಿಗಳ ಜೀವನದ ಚೆಲ್ಲಾಟ- ಆರೋಪ: ಈ ಘಟನೆಯನ್ನು ನೋಡಿದಂತಹ ಸ್ಥಳೀಯರು ಹಾಗೂ ರೋಗಿಯ ಸಂಬಂಧಿಕರು ಆಸ್ಪತ್ರೆಯ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೈದ್ಯ, ರೋಗಿಗಳ ಜೀವನದ ಚೆಲ್ಲಾಟ ವಾಡುತ್ತಿದ್ದಾರೆ. ಬಡವರು, ಖಾಸಗಿ ಆಸ್ಪತ್ರೆಗೆ ಹೋಗಲಾಗದವರು ಸರ್ಕಾರಿ ಆಸ್ಪತ್ರೆ ಕಡೆ ಬರುತ್ತಾರೆ. ವೈದ್ಯರೇ ನಮ್ಮ ದೇವರು ಎಂದು ಅವರ ಬಳಿ ಬಂದು ಚಿಕಿತ್ಸೆ ಪಡೆಯುತ್ತಾರೆ. ಆದರೆ, ಇಂಥ ವೈದ್ಯರು ಇದ್ದರೆ, ಜೀವ ಕಳೆದು ಕೊಳ್ಳುವುದಂತೂ ಗ್ಯಾರಂಟಿ. ಕೂಡಲೇ ಇಂತಹ ವೈದ್ಯರ ಮೇಲೆ ಶಿಸ್ತುಕ್ರಮ ಜರುಗಿಸಬೇಕು ಎಂದು ರೋಗಿಗಳ ಸಂಬಂಧಿಕರು ಆಗ್ರಹಿಸಿದರು.
ಜಿಲ್ಲಾ ವೈದ್ಯಾಧಿಕಾರಿ ಉಮೇಶ್ ಹೇಳಿದ್ದೇನು?: ವೈದ್ಯನ ಅವಾಂತರ ನೋಡಿದ ರೋಗಿಗಳ ಕೆಲ ಸಂಬಂಧಿಕರು ಆಸ್ಪತ್ರೆಯ ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡರು. ಇನ್ನು ಜಿಲ್ಲಾ ವೈದ್ಯಾಧಿಕಾರಿ ಉಮೇಶ್ ಅವರು, ಈ ಪ್ರಕರಣದ ಬಗ್ಗೆ ಒಂದು ತಂಡ ರಚಿಸಿ, ಸರಿಯಾದ ತನಿಖೆ ಮಾಡಿಸಿ ತಪ್ಪು ಮಾಡಿದ ವೈದ್ಯನ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂಬ ಭರವಸೆ ನೀಡಿದ್ದಾರೆ.
ವೈದ್ಯನ ಅಮಾನತ್ತಿಗೆ ಸಚಿವ ದಿನೇಶ್ ಗುಂಡೂರಾವ್ ಸೂಚನೆ: ವೈದ್ಯೋ ನಾರಾಯಣ ಹರಿ ಎಂಬ ಮಾತಿಗೆ ಈ ವೈದ್ಯ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುವ ರೋಗಿಗಳ ಜೀವದ ಜೊತೆಗೆ ಚೆಲ್ಲಾಟ ವಾಡುತ್ತಿರುವುದು ಬಹಿರಂಗವಾಗಿದೆ. ಕಳಸ ತಾಲೂಕು ಸರ್ಕಾರಿ ಕರ್ತವ್ಯನಿರತ ವೈದ್ಯನ ವಿರುದ್ಧ ಮದ್ಯಸೇವನೆ ಆರೋಪ ಹಿನ್ನಲೆಯಲ್ಲಿ ಅಮಾನತು ಮಾಡುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು, ಚಿಕ್ಕಮಗಳೂರು ಡಿಹೆಚ್ಒಗೆ ಸೂಚನೆ ನೀಡಿದ್ದಾರೆ. ತಪ್ಪಿತಸ್ಥ ವೈದ್ಯನ ಅಮಾನತ್ತಿಗೆ ಚಿಕ್ಕಮಗಳೂರು ಡಿಎಚ್ಒಗೆ ಸೂಚನೆ ನೀಡಿದ ಆರೋಗ್ಯ ಸಚಿವರು, ಅಲ್ಲದೇ ತನಿಖೆ ಮಾಡಿ ವರದಿ ಸಲ್ಲಿಸುವಂತೆಯೂ ತಿಳಿಸಿದ್ದಾರೆ.
ಇದನ್ನೂ ಓದಿ: ಮಂಡ್ಯದಲ್ಲಿ ಆಟೋಚಾಲಕನ ಮೇಲೆ ಪೊಲೀಸ್ ಪೇದೆಯ ದರ್ಪ: ವಿಡಿಯೋ ವೈರಲ್