ಚಿಕ್ಕಮಗಳೂರು: ತೌಕ್ತೆ ಚಂಡಮಾರುತದ ಪರಿಣಾಮ ಇಂದು ಬೆಳಗಿನಿಂದಲೂ ಜಿಲ್ಲಾದ್ಯಂತ ತುಂತುರು ಮಳೆಯಾಗುತ್ತಿದೆ.
ಚಿಕ್ಕಮಗಳೂರು ನಗರ, ಮೂಡಿಗೆರೆ, ಕೊಪ್ಪ, ಎನ್.ಆರ್ ಪುರ, ಶೃಂಗೇರಿ, ಜಯಪುರ ಸೇರಿದಂತೆ ಹಲವೆಡೆ ಮಳೆಯಾಗುತ್ತಿದೆ. ಬೆಳ್ಳಂಬೆಳಗ್ಗೆ ಜಿಟಿಜಿಟಿ ಮಳೆ ಹಿನ್ನೆಲೆ ರಸ್ತೆಗಿಳಿಯಲು ಜನರು ಹಿಂದೆಟು ಹಾಕುತ್ತಿದ್ದಾರೆ. ಜಿಲ್ಲೆಯಲ್ಲಿ ಎರಡು ದಿನ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಮಲೆನಾಡು ಭಾಗದ ಜನರು ಎಚ್ಚರದಿಂದ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಮಂಡ್ಯದಲ್ಲಿ ತುಂತುರು ಮಳೆ:
ತೌಕ್ತೆ ಚಂಡಮಾರುತದ ಪರಿಣಾಮದಿಂದ ಸಕ್ಕರೆ ನಾಡು ಮಂಡ್ಯದಲ್ಲಿಯೂ ಮುಂಜಾನೆಯಿಂದ ತುಂತುರು ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಪ್ರತಿನಿತ್ಯ ಅಗತ್ಯ ವಸ್ತುಗಳ ಖರೀದಿಸಲು ಮುಂದಾಗುತ್ತಿದ್ದ ಜನರಿಗೆ ಬೆಳಗ್ಗೆಯಿಂದ ಬರುತ್ತಿರುವ ತುಂತುರು ಮಳೆ ಅಡ್ಡಿಪಡಿಸಿದೆ. ಸದ್ಯ ಮೋಡ ಕವಿದ ವಾತಾವರಣವಿದ್ದು, ಹೆಚ್ಚು ಮಳೆಯಾಗುವ ಸಂಭವವಿದೆ. ಬಿಸಿಲ ತಾಪಕ್ಕೆ ಮಳೆರಾಯ ತಂಪೆರೆದಿದ್ದು, ರೈತನ ಮೊಗದಲ್ಲಿ ಮಂದಹಾಸ ಮೂಡಿದೆ.
ಚಾಮರಾಜನಗರದಲ್ಲಿಯೂ ತುಂತುರು ಮಳೆ:
ಚಾಮರಾಜನಗರದಲ್ಲಿ ಬೆಳಗ್ಗೆಯಿಂದ ತುಂತುರು ಮಳೆಯಾಗುತ್ತಿದೆ. ಇದರಿಂದ ಜನ ಸಂಚಾರಕ್ಕೆ ಬ್ರೇಕ್ ಬಿದ್ದಿದ್ದು, ಹಣ್ಣು ಮತ್ತು ತರಕಾರಿ ವ್ಯಾಪಾರಕ್ಕೆ ಅಡ್ಡಿಯುಂಟುಮಾಡಿದೆ.
ತಡರಾತ್ರಿ ಆರಂಭಗೊಂಡ ತುಂತುರು ಮಳೆಯಿಂದ ತಂಪನೆ ವಾತಾವರಣ ನಿರ್ಮಾಣವಾದರೂ ಬೆಳಗ್ಗೆ ಜನರು ರಸ್ತೆಗೆ ಬರಲು ಹಿಂದೇಟು ಹಾಕಿದರು. ಲಾಕ್ಡೌನ್ ಹಿನ್ನೆಲೆ ಬೆಳಗ್ಗೆ 6ರಿಂದ 10ರವರೆಗೆ ಹಣ್ಣು ಮತ್ತು ತರಕಾರಿ ವ್ಯಾಪಾರಕ್ಕೆ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಹಣ್ಣು ಮತ್ತು ತರಕಾರಿ ವ್ಯಾಪಾರಿಗಳು ತುಂತುರು ಮಳೆಯ ನಡುವೆ ವ್ಯಾಪಾರ ವಹಿವಾಟು ಆರಂಭಿಸಿದ್ದರು. ಆದರೂ ವ್ಯಾಪಾರ ಅಷ್ಟಕ್ಕಷ್ಟೇ ಎಂಬ ಸ್ಥಿತಿ ಇದೆ.