ಚಿಕ್ಕಮಗಳೂರು : ಜಿಲ್ಲೆಯ ಕೊಪ್ಪ ಕಾಲೇಜಿನಲ್ಲಿ ಸ್ಕಾರ್ಫ್ ಮತ್ತು ಕೇಸರಿ ಶಾಲು ವಿವಾದ ಮುಗಿಯುವ ರೀತಿ ಕಾಣಿಸುತ್ತಿಲ್ಲ. ಇಂದು ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದು, ಕೊಪ್ಪ ತಾಲೂಕಿನ ಬಾಳಗಡಿಯಲ್ಲಿರುವ ಡಿಗ್ರಿ ಕಾಲೇಜಿನಲ್ಲಿ ನಡೆಯುತ್ತಿರುವ ಸ್ಕಾರ್ಫ್-ಕೇಸರಿ ಶಾಲು ವಿವಾದ 2ನೇ ದಿನಕ್ಕೆ ಕಾಲಿಟ್ಟಿದೆ.

ಸ್ಕಾರ್ಫ್ ಧರಿಸುವುದನ್ನು ವಿರೋಧಿಸಿದ ವಿದ್ಯಾರ್ಥಿಗಳು, ಕಾಲೇಜು ಆವರಣದಲ್ಲಿಯೇ ಪ್ರತಿಭಟನೆ ನಡೆಸಿದ್ದಾರೆ. ಕಾಲೇಜಿನಲ್ಲಿ ಸಮಾನ ವಸ್ತ್ರ ಸಂಹಿತೆ ಇರಬೇಕು. ಎಲ್ಲರೂ ಒಂದೇ ರೀತಿಯಲ್ಲಿ ಸಮವಸ್ತ್ರವನ್ನು ಧರಿಸಬೇಕು.

ಕಾಲೇಜಿನಲ್ಲಿ ಸ್ಕಾರ್ಫ್ ಧರಿಸುವವರೆಗೂ ನಾವು ಸಹ ಕೇಸರಿ ಶಾಲನ್ನು ಧರಿಸಿಯೇ ಬರುತ್ತೇವೆ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ. ಇತ್ತ ಪ್ರತಿಭಟನೆಯಲ್ಲಿರುವ ವಿದ್ಯಾರ್ಥಿಗಳನ್ನು ಮನವೊಲಿಸುವಲ್ಲಿ ಕಾಲೇಜು ಪ್ರಾಂಶುಪಾಲರು ವಿಫಲರಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ವೇಳೆ ವಿದ್ಯಾರ್ಥಿಗಳ ಜೊತೆ ಮಾತಿನ-ಚಕಮಕಿ ಕೂಡ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಜನವರಿ 10ರಂದು ಕಾಲೇಜಿನ ಸಭಾಂಗಣದಲ್ಲಿ ಪೋಷಕರ ಸಭೆ ಕರೆದು ನಿರ್ಧಾರ ತೆಗೆದುಕೊಳ್ಳಲಾಗುವುದು. ಅಲ್ಲಿಯವರೆಗೆ ಕಾಲೇಜಿನಲ್ಲಿ ಸಮವಸ್ತ್ರ ಇರುವುದಿಲ್ಲ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆಂದು ವಿದ್ಯಾರ್ಥಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರಿನ ಕಾಲೇಜಿನಲ್ಲಿ ಮತ್ತೆ ಸ್ಕಾರ್ಫ್- ಕೇಸರಿ ಶಾಲು ವಿವಾದ