ಚಿಕ್ಕಮಗಳೂರು : ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಶಾಪ ವಿಮೋಚನೆ ಆಗಬೇಕಾದರೆ ದತ್ತಪೀಠಕ್ಕೆ ಬರಬೇಕು ಎಂದು ಶ್ರೀರಾಮಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಇಂದು ಶ್ರೀರಾಮ ಸಂಘಟನೆಯ ವತಿಯಿಂದ ದತ್ತಮಾಲ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ದತ್ತಮಾಲಧಾರಣೆ ಮಾಡಿದ ನಂತರ ಮಾತನಾಡಿದ ಅವರು, ಸಿಎಂ ಬಿ.ಎಸ್.ಯಡಿಯೂರಪ್ಪಗೆ ದತ್ತಾತ್ರೇಯನ ಶಾಪ ಇದೆ ಎಂದರು.
ಈ ಹಿಂದೆ ಬಿಎಸ್ವೈ ದತ್ತಮಾಲೆ ಧರಿಸಿದ್ದ ಸಂದರ್ಭದಲ್ಲಿ ಸಿಎಂ ಆದ ನಂತರ ದತ್ತಪೀಠಕ್ಕೆ ಬರುತ್ತೇನೆ ಎಂದು ಹೇಳಿದ್ದರು. ಆದರೆ, ಅವರು ಮಾತಿನಂತೆ ನಡೆದುಕೊಂಡಿಲ್ಲ. ಈ ದತ್ತಮಾಲಾ ಅಭಿಯಾನದ ಕೊನೆ ದಿನ ದತ್ತಪೀಠಕ್ಕೆ ಬಂದು ಅವರ ಶಾಪ ವಿಮುಕ್ತಿಗೊಳಿಸಿಕೊಳ್ಳಬೇಕು. ಅವರು ಸಿಎಂ ಆಗಿ ಅಧಿಕಾರ ವಹಿಸಿಕೊಂಡಾಗ ಪೂರ್ಣಾವಧಿ ಅಧಿಕಾರ ಮಾಡಿಲ್ಲ. ಇದಕ್ಕೆಲ್ಲ ದತ್ತಾತ್ರೇಯನ ಶಾಪವೇ ಕಾರಣ ಎಂದ ತಿಳಿಸಿದರು.
ಶಾಪ ವಿಮೋಚನೆ ಆಗಬೇಕಾದರೆ ದತ್ತಪೀಠಕ್ಕೆ ಮಾಲೆ ಹಾಕಿಕೊಂಡು ಬಂದು ದತ್ತಪೀಠವನ್ನ ಹಿಂದೂಗಳಿಗೆ ವಹಿಸಬೇಕು. ಆಗ ಮಾತ್ರ ಮುಂದಿನ ದಿನಗಳಲ್ಲಿ ಪೂರ್ಣಾವಧಿ ಅಧಿಕಾರ ನಡೆಸೋಕೆ ಗುರುಗಳ ಆರ್ಶೀವಾದ ಸಿಗುತ್ತೆ. ಹಿಂದೂಗಳಿಗೆ ದತ್ತಪೀಠ ವಹಿಸೋಕೆ ಬಿಎಸ್‌ವೈಗೆ ಒಳ್ಳೆಯ ಅವಕಾಶವಿದೆ. ಚಳಿಗಾಲದ ಅಧಿವೇಶನದಲ್ಲಿ ಈ ಬಗ್ಗೆ ನಿರ್ಣಯ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಬಜೆಟ್ ಅಧಿವೇಶನದಲ್ಲಿ ನಾವು ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ದತ್ತಪೀಠ ಹಿಂದೂಗಳಿಗೆ ವಹಿಸೋಕೆ ಇದು ಸೂಕ್ತ ಸಮಯ. ಎಲ್ಲಾ ಕೋರ್ಟ್ಗಳಲ್ಲಿ ದತ್ತಪೀಠ ಹಿಂದೂಗಳಿಗೆ ಸೇರಬೇಕೆಂದು ತೀರ್ಪು ಬಂದಿದೆ. ಸದ್ಯ ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಕ್ಕೆ ತೀರ್ಮಾನ ಕೈಗೊಳ್ಳುವಂತೆ ಸೂಚನೆ ನೀಡಿದೆ ಎಂದು ತಿಳಿಸಿದರು.