ಚಿಕ್ಕಮಗಳೂರು: ಕಾಫಿನಾಡು ಮೂಲದ ಯೋಧ ಜಮ್ಮು ಕಾಶ್ಮೀರದಲ್ಲಿ ಮೃತಪಟ್ಟಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬಿಳವಾಲ ಗ್ರಾಮದ ಯೋಧ ಬಿ.ಕೆ ಶೇಷಪ್ಪ ಮೃತರು.
ಇವರು ಭಾರತೀಯ ಸೇನೆಯ ಬಿಎಸ್ಎಫ್ನ ಮೆಕಾನಿಕಲ್ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ನಾಲ್ಕು ದಿನಗಳ ಹಿಂದೆ ಜಮ್ಮು ಕಾಶ್ಮೀರದಲ್ಲಿ ವಾಹನವನ್ನು ರಿಪೇರಿ ಮಾಡುವಾಗ ಜಾಕ್ ಜಾರಿ ಅವರ ತಲೆಗೆ ಗಂಭೀರ ಗಾಯವಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಕಳೆದ ನಾಲ್ಕು ದಿನಗಳಿಂದಲೂ ಕೋಮಾ ಸ್ಥಿತಿಯಲ್ಲಿಯೇ ಇದ್ದರು. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಯೋಧನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಇಡೀ ಗ್ರಾಮವು ಶೋಕದಲ್ಲಿ ಮುಳುಗಿದೆ. ಇನ್ನು ನಾಳೆ ಅವರ ಪಾರ್ಥಿವ ಶರೀರವನ್ನು ಗ್ರಾಮಕ್ಕೆ ತರಲಾಗುತ್ತದೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.