ಚಿಕ್ಕಮಗಳೂರು : ‘’ನಿಮಗೆ ಕಿಟ್ ನೀಡಿದ್ದೇವೆ. ಹಾಗಾಗಿ, ರೇಷನ್ ಕಟ್, ನಿಮಗೆ ಪಡಿತರ ಕೊಡೋದಿಲ್ಲ'' ಎಂದು ಸೊಸೈಟಿ ಸಿಬ್ಬಂದಿ ಹಳ್ಳಿಯ ಜನರಿಗೆ ಹೇಳಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
ಚಿಕ್ಕಮಗಳೂರು ತಾಲೂಕಿನ ಕಳ್ಳಿಕೊಪ್ಪಲು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ಗ್ರಾಮದ 47 ಕುಟುಂಬದ 75 ಜನರಿಗೆ ಈ ಹಿಂದೆ ಕೊರೊನಾ ಪಾಸಿಟಿವ್ ಬಂದಿತ್ತು. ಆಗ ಜನರಲ್ಲಿ ಜಾಗೃತಿ ಮೂಡಿಸಿದ್ದ ತಾಲೂಕು ಆಡಳಿತ, ಎಲ್ಲರಿಗೂ ಕ್ವಾರಂಟೈನ್ ಮಾಡಿಸಿತ್ತು.
ಅಷ್ಟೇ ಅಲ್ಲ, ಪ್ರತಿಯೊಬ್ಬರಿಗೂ 10 ಕೆಜಿ ಅಕ್ಕಿ, ಎಣ್ಣೆ, ಬೇಳೆ, ಉಪ್ಪು ಸೇರಿ ವಿವಿಧ ಸಾಮಗ್ರಿಗಳ ಕಿಟ್‌ನ ಶಾಸಕ ಸಿ ಟಿ ರವಿ ನೇತೃತ್ವದಲ್ಲಿ ನೀಡಲಾಗಿತ್ತು.
ಆದರೆ, ಇಂದು ಅದೇ ಗ್ರಾಮದ ಗ್ರಾಮಸ್ಥರು ಪಡಿತರ ಪಡೆಯಲು ಹೋದಾಗ ನಿಮಗೆ ಆ ದಿನವೇ ಪಡಿತರ ನೀಡಲಾಗಿದೆ ಎಂದು ಸೊಸೈಟಿ ಸಿಬ್ಬಂದಿ ಹೇಳುತ್ತಿದ್ದಾರೆ. ಹಾಗಾಗಿ, ಗ್ರಾಮದ ಜನರು ಶಾಸಕ ಸಿ ಟಿ ರವಿ ಅವರನ್ನು ಪ್ರಶ್ನಿಸುತ್ತಿದ್ದಾರೆ.
ಆ ದಿನ 10ರಿಂದ 15 ಕೆಜಿ ಅಕ್ಕಿ ನೀಡಿದ್ದೀರಿ. ಒಂದೊಂದು ಮನೆಯಲ್ಲಿ ಐದರಿಂದ ಏಳು ಜನ ಇದ್ದಾರೆ. ಈಗ ಸರಿಯಾಗಿ ಪಡಿತರ ನೀಡುತ್ತಿಲ್ಲ ಎಂದು ತಾಲೂಕು ಆಡಳಿತದ ವಿರುದ್ಧ ಹಳ್ಳಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸೊಸೈಟಿ ಮುಂದೆ ಗ್ರಾಮದ ಜನರು ಧರಣಿ ನಡೆಸುತ್ತಿದ್ದಾರೆ.