ಚಿಕ್ಕಮಗಳೂರು: ಜಿಲ್ಲೆಯಲ್ಲಿ ಪಿಎಫ್ಐ ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ಮುಂದೆ ಬಂದು ಕೊರೊನಾ ಸೋಂಕಿನಿಂದ ಮೃತಪಟ್ಟವರ ಮೃತ ದೇಹದ ಅಂತ್ಯ ಸಂಸ್ಕಾರ ನಡೆಸುತ್ತಿದ್ದು, ಇವರ ಸಮಾಜ ಮುಖಿ ಕಾರ್ಯದಿಂದ ಇತರರಿಗೆ ಮಾದರಿಯಾಗುತ್ತಿದ್ದಾರೆ.
ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಮೃತಪಟ್ಟವರ ಕುಟುಂಬಸ್ಥರು, ಸ್ನೇಹಿತರೇ ಅಂತ್ಯ ಸಂಸ್ಕಾರ ಮಾಡಲು ಹಿಂಜರಿಯುತ್ತಿದ್ದಾರೆ ಇಂತಹ ಸಂದರ್ಭದಲ್ಲಿ ಪಿಎಫ್ಐ ಸಂಘಟನೆಯ ಕಾರ್ಯಕರ್ತರು ಖುದ್ದಾಗಿ ಮುಂದೆ ಬಂದು ಈ ಸತ್ಕಾರ್ಯಕ್ಕೆ ನಡೆಸುತ್ತಿದ್ದಾರೆ.
ಪಿಎಫ್ಐ ಸಂಘಟನೆಯ ಕಾರ್ಯಕರ್ತರು ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಿ ಈವರೆಗೂ ಜಿಲ್ಲೆಯಲ್ಲಿ 11 ಕೊರೊನಾ ಸೋಂಕಿತ ಮೃತರ ಅಂತ್ಯ ಸಂಸ್ಕಾರವನ್ನು ಮಾಡಿದ್ದಾರೆ. ಸಂಘದ ಕಾರ್ಯಕರ್ತರು ಆಸ್ವತ್ರೆಗೆ ತೆರಳಿ ಆರೋಗ್ಯ ಸಿಬ್ಬಂದಿ ಹಾಗೂ ಮೃತನ ಕುಟುಂಬ ಸದಸ್ಯರೊಂದಿಗೆ ಚರ್ಚಿಸಿ ಅವರ ಒಪ್ಪಿಗೆ ಪಡೆದು ಶವದ ಅಂತ್ಯ ಸಂಸ್ಕಾರವನ್ನು ಮಾಡುತ್ತಿದ್ದಾರೆ.
ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳನ್ನು ಗೌರವದಿಂದ ಬೀಳ್ಕೋಡುವುದರ ಮೂಲಕ ಸಾಮಾಜಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.