ಚಿಕ್ಕಮಗಳೂರು: ನಕ್ಸಲ್ ನಾಯಕ ಸಾಕೇತ್ ರಾಜನ್ ಹತನಾಗಿ ಇಂದಿಗೆ 16 ವರ್ಷ ತುಂಬುತ್ತಿದೆ. ಘಟನೆ ಹಿನ್ನೆಲೆ ಮತ್ತು ಅದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಓದಿ: ನಕ್ಸಲ್ ನಾಯಕ ಸಾಕೇತ್ ರಾಜನ್ ಹತನಾಗಿ ಇಂದಿಗೆ 14 ವರ್ಷ: ಹಲವೆಡೆ ಕೂಂಬಿಂಗ್!
ಮೂಡಿಗೆರೆ ತಾಲೂಕಿನ ಮೆಣಸಿನ ಹಾಡ್ಯದ ವಿಷ್ನೇಶ್ವರ ಕಟ್ಟೆ ಎಂಬಲ್ಲಿ 2005 ಫೆ. 5ರ ನಡುರಾತ್ರಿ ಎಎನ್ಎಫ್ ಪೊಲೀಸ್ ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ದಂಡನಾಯಕ ಸಾಕೇತ್ ರಾಜನ್ ಹಾಗೂ ಶಿವಲಿಂಗೂ ಹತರಾಗಿದ್ದರು. ಸಾಕೇತ್ ಮೃತಪಟ್ಟ ಕಲ್ಲು ಬಂಡೆ ಮೇಲೆ ನಕ್ಸಲರು ಸರಿಯಾಗಿ ವರ್ಷಕ್ಕೆ ಸ್ಮಾರಕವೊಂದನ್ನು ನಿರ್ಮಿಸಿದ್ದರು.
ಸದ್ಯಕ್ಕೆ ನಕ್ಸಲ್ ಚಟುವಟಿಕೆಗಳು ಜಿಲ್ಲೆಯಲ್ಲಿ ಕಡಿಮೆ ಇದ್ದರೂ ಕಳಸ, ಕುದುರೆಮುಖ, ಮೆಣಸಿನಹಾಡ್ಯ, ಬಲಿಗೆ, ಶೃಂಗೇರಿ, ತೀರ್ಥಹಳ್ಳಿ, ಆಗುಂಬೆ, ಕೆರೆಕಟ್ಟೆ, ಜೈಪುರ, ಮುಂತಾದ ಸ್ಥಳಗಳಲ್ಲಿ ಎಎನ್ಎಫ್ ಸಿಬ್ಬಂದಿ ಪ್ರತಿ ನಿತ್ಯ ಕೂಂಬಿಂಗ್ ಕಾರ್ಯಚರಣೆ ಮಾಡುತ್ತಲೇ ಇದ್ದಾರೆ.
ಚಿಕ್ಕಮಗಳೂರಿನಲ್ಲಿ ಪ್ರಮುಖವಾಗಿ ಐದು ಕೂಂಬಿಂಗ್ ತಂಡಗಳು ಕಾರ್ಯಾಚರಣೆ ಮಾಡುತ್ತಿದ್ದು, ಒಂದೊಂದು ತಂಡದಲ್ಲಿ 15 ರಿಂದ 20 ಎಎನ್ಎಫ್ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ದಿಗೆ ಸರ್ಕಾರ ಕೋಟ್ಯಾಂತರ ರೂ. ಬಿಡುಗಡೆ ಮಾಡುತ್ತಿದ್ದರೂ ನಿರೀಕ್ಷಿತ ಸಾಧನೆಯಾಗದೇ ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ವಾಸ ಮಾಡುವ ಸಾಕಷ್ಟು ಜನರಿಗೆ ಮೂಲಭೂತ ಸೌಕರ್ಯ ದೊರೆತಿಲ್ಲ.
ಬಲಿಗೆ, ಮಾವಿನ ಹೊಲ, ಕಾರ್ಲೇ, ನೆಲ್ಲಿಕೋಟ, ನಾಗಸಂಪಿಗೆ, ಮಕ್ಕಿ, ಭದ್ರಾಕಾಳಿ ಮುಂತಾದ ಕಡೆಯ ಗ್ರಾಮಗಳಲ್ಲಿ ಇನ್ನು ಸಾಕಷ್ಟು ಅಭಿವೃದ್ದಿ ಕೆಲಸ ಕಾರ್ಯಗಳು ನಡೆಯಬೇಕಿದೆ.
ಒಟ್ಟಾರೆಯಾಗಿ ನಕ್ಸಲ್ ನಾಯಕ ಸಾಕೇತ್ ರಾಜನ್ ಮೃತಪಟ್ಟು ಇಂದಿಗೆ 16 ವರ್ಷಗಳೇ ಕಳೆದಿದೆ. ಆದರೂ ಈ ಭಾಗದಲ್ಲಿ ಇನ್ನೂ ರಸ್ತೆ, ವಿದ್ಯುತ್, ನೀರು ಸರಿಯಾಗಿ ಜನರಿಗೆ ಸಿಗುತ್ತಿಲ್ಲ. ಎಷ್ಟೋ ಕುಟುಂಬಗಳು ಹಕ್ಕು ಪತ್ರ ಸಿಗದೇ ಅತಂತ್ರವಾಗಿವೆ. ಈ ಭಾಗದಲ್ಲಿ ನಕ್ಸಲ್ ಚಟುವಟಿಕೆಗಳು ಗರಿಗೆದರಿದಾಗ ಎಚ್ಚೆತ್ತುಕೊಳ್ಳುವ ಸರ್ಕಾರ ಇಲ್ಲಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಹುಡುಕಿ ಇಲ್ಲಿ ವಾಸಿಸುವ ಜನರಿಗೆ ಅನುಕೂಲ ಮಾಡಿಕೊಡಬೇಕಿದೆ.