ಚಿಕ್ಕಮಗಳೂರು: ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಬಹಳ ಕಡೆಗಳಿಂದ ಆಹ್ವಾನ ಇದೆ. ಆದ್ರೆ ನಾನಿನ್ನೂ ಈ ಬಗ್ಗೆ ತೀರ್ಮಾನ ಮಾಡಿಲ್ಲ. ಬಾದಾಮಿಯವರು ಅಲ್ಲೇ ನಿಲ್ಲಬೇಕು ಎಂದು ಒತ್ತಾಯ ಮಾಡ್ತಿದ್ದಾರೆ. ಕೋಲಾರ, ಚಿಕ್ಕಮಗಳೂರು, ವರುಣಾದವರು ಹೇಳ್ತಿದ್ದಾರೆ. ಬಹಳ ಕಡೆ ಕರೆಯುತ್ತಿದ್ದು, ನೋಡೋಣ.. ಅಂತಿಮವಾಗಿ ಜನ-ಪಕ್ಷ ಏನು ಹೇಳ್ತಾರೋ ನೋಡೋಣ ಎಂದು ಎಂಎಲ್ಎ ಚುನಾವಣೆಗೆ ಸ್ಪರ್ಧೆ ವಿಚಾರದ ಬಗ್ಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಜಿಲ್ಲೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿ ಟಿ ರವಿಯದ್ದು ಬರೀ ಸುಳ್ಳಿನ ಆರೋಪ. ಸಿ ಟಿ ರವಿ ಅಂದ್ರೆ ಸುಳ್ಳಿನ ರವಿ ಅಂತ ಅರ್ಥ ಎಂದು ವಾಗ್ದಾಳಿ ನಡೆಸಿದರು. ನಂತರ ವಲಸೆ ಹೋದವರಿಗೂ ಡಿಕೆಶಿ ಕಾಂಗ್ರೆಸ್ ಗೆ ಆಹ್ವಾನ ವಿಚಾರದ ಬಗ್ಗೆ ಮಾತನಾಡಿದ್ದು, ಬೇರೆಯವರು ಅರ್ಜಿ ಹಾಕಬಹುದಾ? ಎಂದು ಕೇಳಿದ್ದಾರೆ. ಹಾಕಬಹುದು ಎಂದಿದ್ದಾರೆ. ಕಾಂಗ್ರೆಸ್ ಐಡಿಯಾಲಜಿ, ನಾಯಕತ್ವದ ಮೇಲೆ ನಂಬಿಕೆ ಇದ್ದವರು ಹಾಕಬಹುದು. ಅರ್ಜಿ ಹಾಕಿದ ಕೂಡಲೇ ಕಾಂಗ್ರೆಸ್ ಸೇರಿದರು ಅಂತ ಅಲ್ಲ ಎಂದರು.
ಅಲ್ಲಂ ವೀರಭದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ಕಮಿಟಿ ಇದೆ. ಅಲ್ಲಿ ಫೈನಲ್ ಆಗಬೇಕು. ಮೂಡಿಗೆರೆಯಲ್ಲಿ ಮೋಟಮ್ಮ ಮಗಳಿಗೆ ಟಿಕೆಟ್ ಬೇಡ ಎಂದು ಸ್ಥಳೀಯರು ನಾಯಕರು ಸಭೆ ನಡೆಸಿರುವ ಹಿನ್ನೆಲೆ ಎಲ್ಲಿ ಆಂತರಿಕ ಡೆಮಾಕ್ರಸಿ ಇದೆಯೋ ಅಲ್ಲೆಲ್ಲಾ ಇವು ಕಾಮನ್. ಬಿಜೆಪಿಯಲ್ಲಿ ಇಂಟರ್ನಲ್ ಡೆಮಾಕ್ರಸಿ ಇಲ್ಲ. ಇವೆಲ್ಲಾ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ನಿರೀಕ್ಷೆಗೂ ಮೀರಿ ಜನ ಸ್ಪಂದಿಸಿದ್ದಾರೆ: ಈ ಬಾರಿ 130-150 ಸೀಟ್ ಗೆಲ್ಲುತ್ತೇವೆಂಬ ವಿಶ್ವಾಸವಿದೆ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. 21 ದಿನದಲ್ಲಿ 510 ಕಿ. ಮೀ ಪಾದಯಾತ್ರೆ ಮಾಡಿದ್ದೇವೆ. ಇದೊಂದು ಐತಿಹಾಸಿಕ ಪಾದಯಾತ್ರೆ, ನಿರೀಕ್ಷೆಗೂ ಮೀರಿ ಜನ ಸ್ಪಂದಿಸಿದ್ದಾರೆ. ನಿತ್ಯ 20 ರಿಂದ 50 ಸಾವಿರ ಜನ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದು, ರಾಯಚೂರಲ್ಲಿ ಒಂದು ಲಕ್ಷ ಜನ ಸೇರಿದ್ದರು. ಇದು ಕರ್ನಾಟಕದಲ್ಲಿ ಅತ್ಯಂತ ಯಶಸ್ಸು ಕಂಡ ಪಾದಯಾತ್ರೆ. ಇದು ಕರ್ನಾಟಕ ಕಾಂಗ್ರೆಸ್ಗೆ ಶಕ್ತಿ ತರಲಿದೆ. ನನ್ನ ಪ್ರಕಾರ, ಕನಿಷ್ಠ 130-150 ಸ್ಥಾನ ಗೆಲ್ಲುತ್ತೇವೆ ಎಂದು ಹೇಳಿದರು.
ಓದಿ: ಮರಳಿ ಬನ್ನಿ ಎಂದು ಸಂತೆಯಲ್ಲಿ ನಿಂತು ಕರೆಯುತ್ತಿರುವ ಕಾಂಗ್ರೆಸ್ ದಿವಾಳಿಯಾಗಿದೆ: ಅಶೋಕ್ ವ್ಯಂಗ್ಯ