ಚಿಕ್ಕಬಳ್ಳಾಪುರ: ಪೇಸಿಎಂ ಪೋಸ್ಟರ್ ಅಭಿಯಾನದ ವಿರುದ್ದ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಇಂತಹ ಬೆದರಿಕೆಗಳಿಗೆಲ್ಲ ನಾವು ಬೆದರಿತೀವಾ ?.ಕಾನೂನುಗಳು ನಮಗೂ ಗೊತ್ತಿದೆ. ನಾನು ಲಾ ಓದಿದ್ದೀನಿ. ಅವರು ಲಾ ಓದಿಲ್ಲಾ,ಇಂಜಿನಿಯರಿಂಗ್ ಓದಿರೋದು. ಅವರು ಕಾನೂನು ಕ್ರಮ ತಗೊಂಡ್ರೆ ನಾವ್ ಸುಮ್ನೆ ಇರ್ತೀವಾ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಜಿಲ್ಲೆಯ ಗೌರಿಬಿದನೂರಿನ ಸಮಾನತ ಸೌಧದಲ್ಲಿ ಪ್ರೊ ಗಂಗಾಧರ ಮೂರ್ತಿ ಅವರ ನುಡಿನಮನ ಕಾರ್ಯಕ್ರಮದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರದ ವಿರುದ್ಧ ಕಮಿಷನ್ ಹೇಳಿಕೆ ಕೊಟ್ಟ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣನ ವಿರುದ್ಧ ಕ್ರಮ ಕೈಗೊಂಡರೆ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಬಯಲಿಗೆ ಬರುತ್ತದೆ. ಅದಕ್ಕಾಗಿ ಅವರನ್ನು ಬಂಧಿಸಲು ಮುಂದಾಗುತ್ತಿಲ್ಲ ಎಂದು ಟೀಕಿಸಿದರು.
ಇನ್ನೂ ಕಮೀಷನ್ ಅಂತ ಕೆಂಪಣ್ಣ ಹೇಳ್ತಾರಲ್ಲ. ಕೆಂಪಣ್ಣನ ಮೇಲೆ ಕ್ರಮ ತೆಗೆದುಕೊಳ್ಳಿ. ಅವರ ಮೇಲೆ ಯಾಕೆ 1 ವರ್ಷ ಕಳೆದರೂ ಕ್ರಮ ಕೈಗೊಂಡಿಲ್ಲ. ಯಾಕೆಂದರೆ ಇವರ ಬಣ್ಣ ಬಯಲಾಗುತ್ತದೆ ಎಂದು ಕ್ರಮ ಕೈಗೊಂಡಿಲ್ಲ. ಬಿಜೆಪಿ ಸರ್ಕಾರದವರು ತಪ್ಪಿತಸ್ಥರರು. ಈ ಸರ್ಕಾರದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ ನಡೆಯುತ್ತಿದೆ ಅದಕ್ಕೆ ಅವರು ಪಲಾಯನ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಇನ್ನೂ ಮಂಗಳವಾರ ಸದನದಲ್ಲಿ ಶೇ 40ರಷ್ಟು ಕಮಿಷನ್ ಬಗ್ಗೆ ಚರ್ಚೆಗೆ ಅವಕಾಶ ಕೇಳಿದೆ. ಅಂದು ಚರ್ಚೆಗೆ ಬಾರದ ಹಾಗೆ ನೋಡಿಕೊಂಡರು. ಚರ್ಚೆ ಮಾಡಲು ಅವಕಾಶವನ್ನೂ ಕೊಡಲಿಲ್ಲ. ಕಳೆದ ಬೆಳಗಾಂನಲ್ಲಿ ಕೊಟ್ಟಾಗಲೂ ಚರ್ಚೆ ಆಗಲಿಲ್ಲ ಎಂದು ಹೇಳಿದರು.
ಸದ್ಯ ರಾಜ್ಯದಲ್ಲಿ ಮತ್ತೆ ವಿದ್ಯುತ್ ದರ ಏರಿಕೆಯಾಗುತ್ತಿರುವ ವಿಚಾರ ಪ್ರತಿಕ್ರಿಯಿಸಿದ ಅವರು, ವಿದ್ಯುತ್ ದರ ಅಲ್ಲ.ರಾಜ್ಯದಲ್ಲಿ ಎಲ್ಲಾ ಬೆಲೆಗಳು ಗಗನಕ್ಕೆ ಏರಿವೆ. ಬೆಲೆ ಏರಿಸೋದು ಬಡವರ ಹೊಟ್ಟೆ ಮೇಲೆ ಹೊಡೆಯೋದು. ಬಡವರ ರಕ್ತ ಹೀರೋದು ಬಿಜೆಪಿಯವರ ಕಾಯಕ ಎಂದು ಹೇಳಿದರು.
ಇದನ್ನೂ ಓದಿ :ಪೇಸಿಎಂ ಅಭಿಯಾನ: ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ದೂರು ದಾಖಲು