ಚಿಕ್ಕಮಗಳೂರು: ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬ ಘೋಷಣೆಯನ್ನು ಕಾಂಗ್ರೆಸ್ ಕಾರ್ಯಕರ್ತರು ಮತ್ತೆ ಕೂಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಖಾಸಗಿ ಕಾರ್ಯಕ್ರಮದ ಪ್ರಯುಕ್ತ ಸಿದ್ದರಾಮಯ್ಯ ಜಿಲ್ಲೆಗೆ ಬಂದಿದ್ದ ವೇಳೆ ಈ ಘೋಷಣೆ ಮೊಳಗಿದೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾಧ್ಯಮಗೋಷ್ಟಿ ನಡೆಸಿ ವಾಪಸ್ ತೆರಳುವ ವೇಳೆ ಕಾರ್ಯಕರ್ತರು ಮುಂದಿನ ಸಿಎಂ ಸಿದ್ದು ಎಂದು ಕೂಗಿದ್ದಾರೆ. ಕಾಲುವೆ ದುರಸ್ತಿಗೆ ಆಗ್ರಹಿಸಿ ಸಚಿವ ಶ್ರೀರಾಮುಲು ಅವರು ಮಂಗಳವಾರ ರಾತ್ರಿ ವಾಸ್ತವ್ಯ ಹೂಡಿದ್ದ ವಿಚಾರದ ಬಗ್ಗೆ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಶ್ರೀರಾಮುಲು ಈ ಸಲ ಮೊಣಕಾಲ್ಮೂರಲ್ಲಿ ನಿಂತು ಗೆಲ್ಲಲಿ ನೋಡೋಣ. ಪಾರ್ಟಿ ಬಿಟ್ಟು ಹೋಗಿದ್ದಾನಲಪ್ಪಾ. ಇವರಿಗೆ ಪಕ್ಷ, ಸಿದ್ಧಾಂತ, ಆರ್ಎಸ್ಎಸ್ ಬಗ್ಗೆ ಯಾವ ಲಾಯಲ್ಟಿ ಇದೆ. ಇವ ಆರ್ಎಸ್ಎಸ್ ಗಿರಾಕಿನಾ?. ಕಾಂಗ್ರೆಸ್ನಿಂದ ಮೊದಲು ಮುನ್ಸಿಪಲ್ ಮೆಂಬರ್ ಆಗಿ, ಮಧ್ಯ ಬಂದು ಪಾರ್ಟಿ ಸೇರಿದ್ದಾನೆ. ರೈತರಿಗೆ ಪರಿಹಾರ ನೀಡಿಲ್ಲ, ಯಾವ ಕಾಳಜಿ ಇದೆ ತೋರಿಸಲಿ. ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ನಾಗಮೋಹನ್ ದಾಸ್ ವರದಿ ಜಾರಿಗೆ ತರುತ್ತೇವೆಂದು ರಕ್ತದಲ್ಲಿ ಬರೆದುಕೊಡುತ್ತೇನೆ ಎಂದು ಹೇಳಿದ್ದರು. ಅದು ಆಯ್ತೇನಪ್ಪಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಧರ್ಮ ಹಾಗೂ ಹೆಣದ ಮೇಲೆ ಬಿಜೆಪಿ ರಾಜಕಾರಣ ಮಾಡುತ್ತಿದೆ: ಸಿದ್ದರಾಮಯ್ಯ ಆರೋಪ