ಚಿಕ್ಕಮಗಳೂರು : ಜಿಲ್ಲೆಯಲ್ಲಿ ಪ್ರವಾಹದಿಂದಾಗಿ ಮನೆ ಕಳೆದುಕೊಂಡಿದ್ದ ಇಬ್ಬರು ರೈತರು ಸರಿಯಾದ ಸಮಯಕ್ಕೆ ಪರಿಹಾರ ಸಿಗಲಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಇಬ್ಬರೂ ಮೃತ ರೈತರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಕಾರ್ಗದ್ದೆ ಹಾಗೂ ಎಸ್ ಕೆ ಮೆಗಲು ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡ ಚಂದ್ರೇಗೌಡ ಹಾಗೂ ಚನಪ್ಪಗೌಡ ಮನೆಗೆ ಸಿದ್ದರಾಮಯ್ಯ ಭೇಟಿ, ಕುಟುಂಬ ಸದಸ್ಯರಿಗೆ ಧೈರ್ಯ ತುಂಬಿದರು. ಇದೇ ವೇಳೆ ಎರಡು ಕುಟುಂಬಗಳಿಗೆ ತಲಾ 50 ಸಾವಿರ ರೂ. ಧನ ಸಹಾಯ ಮಾಡಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ನಾನು ಸಿಎಲ್ಪಿ ನಾಯಕ, ಮಾಜಿ ಮುಖ್ಯಮಂತ್ರಿ. ಆದರೆ, ಇಲ್ಲಿ ತಹಶೀಲ್ದಾರ್ ಬಂದಿಲ್ಲ. ನಾನು ಬಂದರೂ ಯಾವ ಅಧಿಕಾರಿಗಳೂ ಇಲ್ಲ. ಈ ಸರ್ಕಾರವನ್ನ ಏನಂತಾ ಕರೆಯೋದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೃತ ರೈತರ ಕುಟುಂಬಕ್ಕೆ ಸರ್ಕಾರ ಸಾಂತ್ವನ ಹೇಳುವ ಕೆಲಸ ಮಾಡಿಲ್ಲ. ಶಾಸಕರು, ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ಕೊಟ್ಟಿಲ್ಲ. ಸುಳ್ಳು ಹೇಳಿಕೊಂಡು ಎಲ್ಲರೂ ತಿರುಗಾಡುತ್ತಿದ್ದಾರೆ. ಜನ ಗೊಂದಲದಲ್ಲಿದ್ದಾರೆ. ಹಾಗಾದರೆ ಜನ ಏನು ಮಾಡಬೇಕು. ಈ ಕೂಡಲೇ ಸರ್ಕಾರವನ್ನ ಕಿತ್ತು ಎಸೆಯಬೇಕು ಎಂದು ವಾಗ್ದಾಳಿ ನಡೆಸಿದರು. ಜಿಲ್ಲಾ ಉಸ್ತುವಾರಿ ಸಚಿವ ಸಿ ಟಿ ರವಿ ಈ ಕಡೆ ಬಂದೇ ಇಲ್ಲ. ಇದಕ್ಕಿಂತ ಒಳ್ಳೆ ಕೆಲಸ ಏನಿದೆ ಎಂದು ಏಕವಚನದಲ್ಲೇ ಸಿ ಟಿ ರವಿ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದರು.