ಚಿಕ್ಕಮಗಳೂರು: ಗುಂಡಾಗಳನ್ನು ಕರೆಯಿಸಿ ಕಾಂಗ್ರೆಸ್ನಿಂದ ಪ್ರಚಾರ ನಡೆಸಲಾಗುತ್ತಿದೆ ಎಂಬ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆಗೆ ಚಿಕ್ಕಮಗಳೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.
ತಮ್ಮ ಪಕ್ಷದ ವಿರುದ್ಧವಾಗಿಯೇ ಅಭ್ಯರ್ಥಿಯನ್ನ ನಿಲ್ಲಿಸಿಕೊಂಡಿರೋರು ರಮೇಶ್ ಜಾರಕಿಹೊಳಿ. ಲಖನ್ ಜಾರಕಿಹೊಳಿಯನ್ನ ವಿಧಾನಪರಿಷತ್ ಚುನಾವಣೆಯಲ್ಲಿ ನಿಲ್ಲಿಸಿರೋದು ಯಾರು? ಬಿಜೆಪಿಯ ಅಧಿಕೃತ ಅಭ್ಯರ್ಥಿಯಿದ್ರೂ ತಮ್ಮ ತಮ್ಮನನ್ನ ನಿಲ್ಲಿಸಿದ್ದಾರೆ. ಈ ರೀತಿ ಹೇಳಿಕೆ ನೀಡೋಕೆ ಅವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದ್ದಾರೆ.
ಸಿಎಂ ಬದಲಾವಣೆ ಕುರಿತು ಈಶ್ವರಪ್ಪರ ಹೇಳಿಕೆ ಕುರಿತ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಈಶ್ವರಪ್ಪ ಬಾಯಿತಪ್ಪಿ ಸತ್ಯ ಹೇಳಿದ್ದಾರೆ. ಆಮೇಲೆ ಸರಿಪಡಿಸಿಕೊಳ್ಳಲು ಹೋಗುತ್ತಿದ್ದಾರೆ, ಆದರೆ ಜನರಿಗೆ ಗೊತ್ತಾಗಿದೆ ಎಂದರು.
ಇದನ್ನೂ ಓದಿ: ಲಖನ್ಗೆ, ರಮೇಶ್ ಜಾರಕಿಹೊಳಿ ಪರೋಕ್ಷ ಬೆಂಬಲ...ಪಕ್ಷ ಗಮನಿಸುತ್ತಿದೆ: ಮಾಜಿ ಡಿಸಿಎಂ ಲಕ್ಷ್ಮಣ ಸವದಿ
ಇದೇ ವೇಳೆ ಕೋವಿಡ್ ಬಗ್ಗೆ ಮಾತನಾಡಿದ ಅವರು, ಸರ್ಕಾರ ಎರಡನೇ ಅಲೆಯಲ್ಲಿ ಸರಿಯಾದ ಸಿದ್ಧತೆಯನ್ನು ಮಾಡಿಕೊಂಡಿರಲಿಲ್ಲ. ಹೀಗಾಗಿ ತುಂಬಾ ಜನ ಸಾವನ್ನಪ್ಪಿದ್ದರು, ಈ ಬಾರಿ ಹಾಗಾಗದಂತೆ ನೋಡಿಕೊಳ್ಳಬೇಕು. ಇಷ್ಟೊತ್ತಿಗಾಗಲೇ ಸರ್ಕಾರ ಎರಡು ಡೋಸ್ ಮುಗಿಸಬೇಕಿತ್ತು. ಬೂಸ್ಟರ್ ವ್ಯಾಕ್ಸಿನೇಷನ್ ಮಾಡಿಸಲು ಕೇಂದ್ರ ಸರ್ಕಾರ ಕೂಡಲೇ ಅನುಮತಿ ನೀಡಬೇಕು. ಇಬ್ಬರಿಗೆ ಒಮಿಕ್ರಾನ್ ಬಂದಿದ್ದು, ಅದು ಹರಡದಂತೆ ಕ್ರಮ ಕೈಗೊಳ್ಳಬೇಕು. ಅಂತಾರಾಷ್ಟ್ರೀಯ ವಿಮಾನಗಳನ್ನ ನಿಲ್ಲಿಸಬೇಕು. ಏರ್ ಪೋರ್ಟ್ನಲ್ಲಿ ಸರಿಯಾದ ತಪಾಸಣೆ ಆಗಬೇಕು ಎಂದು ಹೇಳಿದರು.