ಚಿಕ್ಕಮಗಳೂರು: ಮನೆಯ ಹಕ್ಕು ಪತ್ರ ನೀಡಲು ಲಂಚ ಪಡೆಯುತ್ತಿದ್ದ ತಹಸೀಲ್ದಾರ್ ಮತ್ತು ಗ್ರಾಮ ಲೆಕ್ಕಾಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಗ್ರಾಮ ಲೆಕ್ಕಾಧಿಕಾರಿ ಸಿದ್ದಪ್ಪ, ತಹಸೀಲ್ದಾರ್ ಅಂಬುಜಾ ಎಸಿಬಿ ಬಲೆಗೆ ಬಿದ್ದವರು. ಶೃಂಗೇರಿ ತಾಲೂಕಿನ ಕಾವಡಿ ಗ್ರಾಮದ ಸಂಜಯ್ ಕುಮಾರ್ ಎಂಬುವವರ ಮನೆಯ ಹಕ್ಕು ಪತ್ರ ಮಾಡಿಸಿಕೊಡಲು ಗ್ರಾಮ ಲೆಕ್ಕಾಧಿಕಾರಿ ಸಿದ್ದಪ್ಪ ಮತ್ತು ತಹಸೀಲ್ದಾರ್ ಅಂಬುಜಾ ಅವರು 60 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದರು.
ಈ ಬಗ್ಗೆ ಸಂಜಯ್ಕುಮಾರ್ ಎಸಿಬಿಗೆ ದೂರು ನೀಡಿದ್ದರು. ಎಸಿಬಿ ಅಧಿಕಾರಿಗಳಾದ ಡಿವೈಎಸ್ಪಿ ಗೀತಾ, ಇನ್ಸ್ಪೆಕ್ಟರ್ ಮಂಜುನಾಥ್, ರಾಥೋಡ್ ನೇತೃತ್ವದಲ್ಲಿ ದಾಳಿ ಯೋಜನೆ ರೂಪಿಸಲಾಗಿತ್ತು. ಶೃಂಗೇರಿಯ ಐಬಿಯಲ್ಲಿದ್ದ ಇಬ್ಬರು ಅಧಿಕಾರಿಗಳು ಸಂಜಯ್ಕುಮಾರ್ನಿಂದ 30 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ದಾಳಿ ಮಾಡಿದ ಎಸಿಬಿ ಅಧಿಕಾರಿಗಳು ಇಬ್ಬರನ್ನೂ ರೆಡ್ಹ್ಯಾಂಡಾಗಿ ಹಿಡಿದಿದ್ದಾರೆ.
ಈ ವೇಳೆ ತಹಸೀಲ್ದಾರ್ ಅಂಬುಜಾ ಅವರನ್ನು ವಶಕ್ಕೆ ಪಡೆದು ಕರೆದೊಯ್ಯುವಾಗ ಅಧಿಕಾರಿಯ ಕಡೆಯವರು ದೊಡ್ಡ ಹೈಡ್ರಾಮಾ ಸೃಷ್ಟಿಸಿದ್ದಾರೆ. ಅಂಬುಜಾರನ್ನು ಕರೆದೊಯ್ಯದಂತೆ ತಡೆಯೊಡ್ಡಿದ್ದರು. ಪ್ರಯಾಸದ ಬಳಿಕ ತಹಸೀಲ್ದಾರ್ ಅಂಬುಜಾ ಮತ್ತು ಗ್ರಾಮ ಲೆಕ್ಕಾಧಿಕಾರಿ ಸಿದ್ದಪ್ಪನನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ತಮಿಳು ನಟಿ, ನಿರೂಪಕಿ ಲಕ್ಷ್ಮಿ ಮಂಚುಗೆ ಕೋವಿಡ್ ಸೋಂಕು