ಚಿಕ್ಕಮಗಳೂರು: ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ದಿನಾಚರಣೆ ಅಂಗವಾಗಿ ಚಿಕ್ಕಮಗಳೂರಿನಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಅವರು ಹಾಗೂ ನೂರಾರು ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಪಾದಯಾತ್ರೆ ನಡೆಸಿದ್ದಾರೆ.
ನಗರದ ಬೋಳುರಾಮೇಶ್ವರ ದೇವಸ್ಥಾನದಿಂದ ಆರಂಭವಾದ ಈ ಪಾದಯಾತ್ರೆ ನಗರದ ಐಜಿ ರಸ್ತೆಯ ಮೂಲಕ ಸಾಗಿ ರಾಮನಹಳ್ಳಿಯಲ್ಲಿ ಮುಕ್ತಾಯವಾಗಿದೆ. ನಂತರ ನಗರದ ಹೊರವಲಯದ ಹೆಬ್ಬಳ್ಳಿಯಿಂದ ಪ್ರಾರಂಭವಾದ ಪಾದಯಾತ್ರೆ ಮಲ್ಲೇನಹಳ್ಳಿವರೆಗೂ ನಡೆದಿದೆ. ನಂತರ ಮಲ್ಲೇನಹಳ್ಳಿಯಲ್ಲಿರುವ ದೇವಿರಮ್ಮ ದೇವಸ್ಥಾನಕ್ಕೆ ತೆರಳಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ದೇವಸ್ಥಾನದ ಆವರಣದಲ್ಲಿ ಭಜನೆ ಮಾಡಿದ್ದಾರೆ.
ಸರಳತೆ, ಸ್ವಚ್ಛತೆ ಹಾಗೂ ಸಮಾನತೆಯ ಅಂಗವಾಗಿ ಈ ಪಾದಯಾತ್ರೆ ನಡೆಸಲಾಗಿದೆ. ಈ ಪಾದಯಾತ್ರೆಯಲ್ಲಿ 300ಕ್ಕೂ ಹೆಚ್ಚು ಜನ ಭಾಗವಹಿಸಿದ್ದು ವಿಶೇಷವಾಗಿತ್ತು.