ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿಯ ಹರವಿಕೆರೆ, ಹಳ್ಳಿಕೆರೆ, ಚೆನ್ನನಹಡ್ಲು ಭಾಗದಲ್ಲಿ ಮಳೆಯಿಂದ ಹಾನಿಗೊಳಗಾದ ವಿವಿಧ ಪ್ರದೇಶಗಳಿಗೆ ಉಡುಪಿ -ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಬಳಿಕ ಸ್ಥಳೀಯ ಸಂತ್ರಸ್ತರೊಂದಿಗೆ ಚರ್ಚೆ ಮಾಡಿ ಸರ್ಕಾರದ ವತಿಯಿಂದ ಎಲ್ಲಾ ರೀತಿ ಅನುಕೂಲ ಮಾಡಿಕೊಡಲಾಗುವುದು ಎಂದೂ ಅವರಿಗೆ ಧೈರ್ಯ ತುಂಬಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೂಡಿಗೆರೆ ತಾಲೂಕಿನ ಕಳಸ, ಬಣಕಲ್ ಮತ್ತು ಕೊಟ್ಟಿಗೆಹಾರ ಹೋಬಳಿಗಳಲ್ಲಿ ಅತಿವೃಷ್ಠಿಯಿಂದ ರೈತರಿಗೆ ದೊಡ್ಡ ಪ್ರಮಾಣದ ನಷ್ಟವಾಗಿದೆ. ಕಾಫಿ ಮತ್ತು ಅಡಿಕೆ ತೋಟಗಳು ನೆಲ ಸಮವಾಗಿವೆ. ಇವುಗಳಿಗೆ ಸರ್ಕಾರ ಸೂಕ್ತ ಪರಿಹಾರ ನೀಡಲಿದೆ ಎಂದರು.
ಕಳೆದ ಬಾರಿ ಅತಿವೃಷ್ಠಿಯಿಂದಾಗಿ ಕೊಡಗಿನಲ್ಲಾದ ನಷ್ಟಕ್ಕಿಂತಲೂ ಮೂಡಿಗೆರೆ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದ ನಷ್ಟವಾಗಿತ್ತು. ಇದರ ವಿವರವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ ರೈತರಿಗೆ, ಸಾರ್ವಜನಿಕರಿಗೆ ನೆಮ್ಮದಿಯ ಹಾಗೂ ರಕ್ಷಣೆಯ ಬದುಕು ನೀಡುವ ಪ್ರಯತ್ನ ಮಾಡುತ್ತೇವೆ. ಅತಿವೃಷ್ಠಿಯಾದಂತಹ ಪ್ರದೇಶಗಳಲ್ಲಿರುವ ಜನರ ಮನೆಗಳನ್ನು ಸ್ಥಳಾಂತರಿಸಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.
ಇಂತಹವರಿಗೆ ಬೇರೆಡೆ ಬಡಾವಣೆಗಳನ್ನು ಮಾಡಿ ಮನೆಗಳನ್ನು ಕಟ್ಟಿಕೊಡಲಾಗುತ್ತದೆ ಹಾಗೂ ಸಂತ್ರಸ್ತರಿಗೆ ಮಾಡಿಕೊಡಲಾದ ಬಾಡಿಗೆ ಮನೆಗಳಿಗೆ ರೂ. 5,೦೦೦ ಕ್ಕಿಂತಲೂ ಹೆಚ್ಚಿನ ಮೊತ್ತವನ್ನು ಸರ್ಕಾರ ನೀಡುತ್ತದೆ. ಅಲ್ಲಿಯವರೆಗೂ ತಾತ್ಕಾಲಿಕವಾಗಿ ಶೆಡ್‌ಗಳನ್ನು ನಿರ್ಮಾಣ ಮಾಡಿಕೊಡಲಾಗುತ್ತದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.