ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ನಗರದಲ್ಲಿರುವ ಶಾರದಾ ಫೀಠದಲ್ಲಿರುವ ತುಂಗಾ ನದಿ ತೀರದಲ್ಲಿ ತುಂಗಾ ಪುಷ್ಕರ ಮಹೋತ್ಸವ ನಡೆಯುತ್ತಿದ್ದು, ಈ ಕಾರ್ಯಕ್ರಮವೂ ನ.20 ರಿಂದ ಪ್ರಾರಂಭವಾಗಿದ್ದು, ಇಂದು ಕೊನೆಗೊಳ್ಳಲಿದೆ.
ತುಂಗಾ ನದಿ ತೀರದಲ್ಲಿ ಪುಷ್ಕರ ಮಹೋತ್ಸವ ನಡೆಯಲಿದ್ದು, ಲೋಕ ಕಲ್ಯಾಣಾರ್ಥಕವಾಗಿ ಈ ಮಹೋತ್ಸವ ನಡೆಸಲಾಗುತ್ತಿದೆ. ಉಭಯ ಜಗದ್ಗುರುಗಳ ಸಾನಿಧ್ಯದಲ್ಲಿ ಬೆಳಿಗ್ಗೆ-ಸಂಜೆ ಈ ಮಹೋತ್ಸವ ನಡೆಯುತ್ತಿದೆ. 11 ದಿನಗಳ ಕಾಲ ತುಂಗಾ ನದಿಯಲ್ಲಿ ದೇವರ ತೆಪ್ಪೋತ್ಸವ ಕೂಡ ನಡೆದಿದ್ದು, ಇಂದು ಕೊನೆಯ ದಿನವಾದ್ದರಿಂದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಶೃಂಗೇರಿ ಶಾರದಾ ಮಠಕ್ಕೆ ಭೇಟಿ ನೀಡಿ ತುಂಗಾ ನದಿಯಲ್ಲಿ ಸ್ನಾನ ಮಾಡಿ, ನಂತರ ಶೃಂಗೇರಿ ಶಾರದಾಂಬೆಗೆ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ.
ಏನಿದು ತುಂಗಾ ಪುಷ್ಕರ?
ಗಂಗೆಯೇ ಮೊದಲಾದ 12 ನದಿಗಳಲ್ಲಿ ಪುಷ್ಕರನು ನಿವಾಸ ಮಾಡುವ ಕಾಲಕ್ಕೆ "ಪುಷ್ಕರ" ಎಂದು ಕರೆಯಲಾಗುತ್ತದೆ. ಮೇಷ ಮೊದಲಾದ 12 ರಾಶಿಗಳಲ್ಲಿ ಬೃಹಸ್ಪತಿ (ಗುರು) ಸಂಚರಿಸುವ ಸಮಯದಲ್ಲಿ ಪುಷ್ಕರನು ಆಯಾ ನದಿಗಳಲ್ಲಿ ವಾಸಿಸುತ್ತಾನೆ. ಬೃಹಸ್ಪತಿಯು ಒಂದೊಂದು ವರ್ಷ ಒಂದೊಂದು ರಾಶಿಯಲ್ಲಿ ಸಂಚರಿಸುತ್ತಾನೆ. ಆಗ ಆಯಾ ನದಿಗಳಲ್ಲಿ ಮೂರುವರೆ ಕೋಟಿ ತೀರ್ಥಗಳಿಂದ ಸಹಿತನಾದ ಪುಷ್ಕರನು (ತೀರ್ಥರಾಜ) ಹಾಗೂ ಸಕಲ ಮುನಿಗಳು ಅಂತಹ ತೀರ್ಥಗಳಲ್ಲಿಯೂ, ತೀರ್ಥ ಕ್ಷೇತ್ರಗಳಲ್ಲಿಯೂ ಅದೃಶ್ಯರೂಪದಿಂದ ವಾಸಿಸುತ್ತಾರೆ. ಆದಕಾರಣ ಪ್ರವೇಶ ದಿನದಿಂದ 12 ದಿನಗಳು-ಆದಿಪುಷ್ಕರ ಎಂದೂ, ಕೊನೆಯ 12 ದಿನಗಳು-ಅಂತ್ಯ ಪುಷ್ಕರ ಎಂದೂ ಪ್ರಸಿದ್ಧವಾಗಿದೆ. ಈ ದಿನಗಳಲ್ಲಿ ನದಿ ತೀರಗಳಲ್ಲಿ ಮಾಡುವ ಕ್ಷೇತ್ರವಾಸ-ತೀರ್ಥ ಶ್ರಾದ್ಧ/-ಸ್ನಾನ- ದಾನ- ವ್ರತ-ಜಪ-ತಪ-ಅನುಷ್ಠಾನ- ಪೂಜಾದಿಗಳೆಲ್ಲವೂ ಅನಂತ ಫಲ ಪ್ರದವಾಗಿದೆ. 60 ಸಾವಿರ ವರ್ಷ ಗಂಗೆಯಲ್ಲಿ ಮಿಂದ ಫಲ ಒಂದು ಪುಷ್ಕರ ಸ್ನಾನಕ್ಕಿದೆ.
- ಮೇಷ ರಾಶಿಯಲ್ಲಿ ಗುರು ಪ್ರವೇಶ ಮಾಡಿದಾಗ ಗಂಗಾ ನದಿಗೆ ಪುಷ್ಕರ
- ವೃಷಭ ರಾಶಿಯಲ್ಲಿ ಪ್ರವೇಶ ಮಾಡಿದಾಗ ನರ್ಮದಾ ನದಿಗೆ ಪುಷ್ಕರ
- ಮಿಥುನ ರಾಶಿಯಲ್ಲಿ ಪ್ರವೇಶ ಮಾಡಿದಾಗ ಸರಸ್ವತಿ ನದಿಗೆ ಪುಷ್ಕರ
- ಕರ್ಕಾಟಕ ರಾಶಿಯಲ್ಲಿ ಪ್ರವೇಶ ಮಾಡಿದಾಗ ಯಮುನಾ ನದಿಗೆ ಪುಷ್ಕರ
- ಸಿಂಹ ರಾಶಿಯಲ್ಲಿ ಪ್ರವೇಶ ಮಾಡಿದಾಗ ಗೋದಾವರಿ ನದಿಗೆ ಪುಷ್ಕರ
- ಕನ್ಯಾ ರಾಶಿಯಲ್ಲಿ ಪ್ರವೇಶ ಮಾಡಿದಾಗ ಕೃಷ್ಣಾ ನದಿಗೆ ಪುಷ್ಕರ
- ತುಲಾ ರಾಶಿಯಲ್ಲಿ ಪ್ರವೇಶ ಮಾಡಿದಾಗ ಕಾವೇರಿ ನದಿಗೆ ಪುಷ್ಕರ
- ವೃಶ್ಚಿಕ ರಾಶಿಯಲ್ಲಿ ಪ್ರವೇಶ ಮಾಡಿದಾಗ ಭೀಮರಥಿನದಿಗೆ ಪುಷ್ಕರ
- ಧನಸ್ಸು ರಾಶಿಯಲ್ಲಿ ಪ್ರವೇಶ ಮಾಡಿದಾಗ ಪ್ರಣೀತಾ ನದಿಗೆ ಪುಷ್ಕರ
- ಮಕರ ರಾಶಿಯಲ್ಲಿ ಪ್ರವೇಶ ಮಾಡಿದಾಗ ತುಂಗಭದ್ರಾ ನದಿಗೆ ಪುಷ್ಕರ
- ಕುಂಭ ರಾಶಿಯಲ್ಲಿ ಪ್ರವೇಶ ಮಾಡಿದಾಗ ಸಿಂಧು ನದಿಗೆ ಪುಷ್ಕರ
- ಮೀನ ರಾಶಿಯಲ್ಲಿ ಪ್ರವೇಶ ಮಾಡಿದಾಗ ಪ್ರಣಿತಾ ನದಿಗೆ ಪುಷ್ಕರ
ಸ್ತ್ರೀಯರಾಗಲಿ, ಪುರುಷರಾಗಲೀ ಹುಟ್ಟಿದಾರಾಭ್ಯ ಮಾಡಿದ ಪಾಪಗಳು ಪುಷ್ಕರ ಸಮಯದಲ್ಲಿ ಸ್ನಾನ ಮಾಡುವುದರಿಂದ ಅನಂತ ಪುಣ್ಯಫಲ ಪ್ರಾಪ್ತವಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಈ ದಿನ ನದಿಗಳಿಗೆ ಸಾರ್ವಜನಿಕರು ಭೇಟಿ ನೀಡಿ ಸ್ನಾನ ಮಾಡುವ ಪ್ರತೀತಿ ಇದೆ.