ಚಿಕ್ಕಮಗಳೂರು: ಮಲೆನಾಡು-ಅರೆ ಮಲೆನಾಡು ಹಾಗೂ ಬಯಲು ಸೀಮೆ ವಿಶೇಷ ವಾತವರಣ ಪ್ರದೇಶವನ್ನು ಹೊಂದಿರುವಂತಹ ಜಿಲ್ಲೆ ಚಿಕ್ಕಮಗಳೂರು. ಈ ಜಿಲ್ಲೆಯಲ್ಲಿ ಮಾನವ ಕುಲ ದಿನದಿಂದಾ ದಿನಕ್ಕೆ ಬೆಳೆಯುತ್ತಿದ್ದು, ತನ್ನ ವ್ಯಾಪ್ತಿಯನ್ನು ಚಾಚಿಕೊಂಡಿದೆ. ಈ ಮಧ್ಯೆ ಮಾತೃತ್ವ ಸೌಲಭ್ಯದಿಂದ ಹತ್ತಾರೂ ಹಳ್ಳಿಗಳು ವಂಚಿತವಾಗಿದ್ದು, ಸಾಕಷ್ಟು ಆರೋಗ್ಯ ಸಮಸ್ಯೆಗಳು ಪ್ರತಿನಿತ್ಯ ನಾವು ಕಾಣುತ್ತಿದ್ದೇವೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಲವಾರು ಜನ ನಾನಾ ಸಾಧನೆಗಳನ್ನು ಮಾಡಿದರೆ ಇನ್ನೊಂದು ಕಡೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಅಲ್ಲದೇ ನಕ್ಸಲ್ ಪೀಡಿತ ಜಿಲ್ಲೆ ಎಂದೂ ಕುಖ್ಯಾತಿಯೂ ಗಳಿಸಿದೆ. ಗ್ರಾಮೀಣ ಪ್ರದೇಶದಲ್ಲಿ ಒಂದು ಸಾವಿರ ಜನಸಂಖ್ಯೆಗೆ ಓರ್ವ ಆಶಾ ಕಾರ್ಯಕರ್ತೆಯರನ್ನು ನೇಮಕ ಮಾಡಲಾಗಿದೆ. ಮಲೆನಾಡು ಪ್ರದೇಶದಲ್ಲಿ ಕೆಲವೊಂದು ಕಡೆಗಳಲ್ಲಿ ಮಾತ್ರ ಮನೆ ಇರುತ್ತದೆ. ಇಂತಹ ಮನೆಯಲ್ಲಿ ಗರ್ಭಿಣಿರನ್ನು ಪತ್ತೆ ಮಾಡುವ ಕೆಲಸ ಆರೋಗ್ಯ ಸಿಬ್ಬಂದಿಗಳು ಮಾಡಿ ತಾಯಿ ಕಾರ್ಡ್ ಕೂಡ ನೀಡಲಾಗುತ್ತಿದೆ. ಯಾವ ರೀತಿಯಾಗಿ ಸುರಕ್ಷಿತವಾಗಿ ಆರೈಕೆ ಮಾಡಬೇಕೋ ಆ ರೀತಿಯಲ್ಲಿ ಆರೈಕೆ ಮಾಡಲಾಗುತ್ತಿದೆ. ಅವರಿಗೆ ವೈದ್ಯಕೀಯ ಪರೀಕ್ಷೆ ಮಾಡಲಾಗುತ್ತಿದ್ದು, ಅವರಿಗೆ ಇಂಜೆಕ್ಷನ್ ಸೌಲಭ್ಯವನ್ನು ನೀಡಲಾಗುತ್ತಿದೆ.
ಗರ್ಭಾವಸ್ಥೆ ಸಮಯದಲ್ಲಿ ಬಿಪಿಎಲ್ ಕಾರ್ಡ್ಧಾರರಿಗೆ ಆರ್ಥಿಕ ಸಹಾಯವನ್ನು ಮಾಡಲಾಗುತ್ತಿದೆ. ಕಾಡಂಚಿನ ಮಹಿಳೆಯರನ್ನೂ ಆಸ್ವತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗುತ್ತಿದೆ. ಗುಡ್ಡಗಾಡು ಪ್ರದೇಶದಲ್ಲಿ ವಾಹನ ಸೌಲಭ್ಯ ಇಲ್ಲದೇ ಇದ್ದಾಗ ವಾಹನವನ್ನು ತೆಗೆದುಕೊಂಡು ಹೋಗಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರಿಗೆ ಹೆರಿಗೆ ಸಂದರ್ಭದಲ್ಲಿಯೂ ವಾಹನ ಸೌಲಭ್ಯವನ್ನು ಸಹ ಮಾಡಿಕೊಡಲಾಗುತ್ತಿದೆ. ಆಸ್ವತ್ರೆಯಿಂದ ಡಿಸ್ಚಾರ್ಜ್ ಆದಮೇಲೆಯೂ ಮಹಿಳೆಯರ ಆರೋಗ್ಯ ತಪಾಸಣೆಯನ್ನು ಮಾಡಲಾಗುತ್ತದೆ. ಅವರ ಮನೆಗೆ ತೆರಳಿ ಚಿಕಿತ್ಸೆ ನೀಡೋದು ಆರೋಗ್ಯ ತಪಾಸಣೆ ಮಾಡುವ ಕೆಲಸವನ್ನು ಮಾಡಲಾಗುತ್ತಿದೆ.
ಆದರೆ ಜಿಲ್ಲೆಯಲ್ಲಿ ಬಡವರ್ಗದ ಮಹಿಳೆಯರಿಗಾಗಿ ಜಾರಿಗೆ ತಂದ ಮಾತೃ ಪೂರ್ಣ ಯೋಜನೆ ಸರಿಯಾಗಿ ಜಾರಿ ಆಗಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಸರಿಯಾಗಿ ಅಗತ್ಯವಿದ್ದವರಿಗೆ ಸಿಗುತ್ತಿಲ್ಲ. ಜಿಲ್ಲೆಯ ನಕ್ಸಲ್ ಪೀಡಿತ ಜಾಗದಲ್ಲಿರುವ ಬಡವರಿಗೆ ಹಾಗೂ ಕಾಫಿತೋಟದಲ್ಲಿ ಇರುವ ಬಡ ಹೆಣ್ಣುಮಕ್ಕಳಿಗೆ ಈ ಯೋಜನೆ ಸಿಗುತ್ತಿಲ್ಲ. ಆಶಾ ಕಾರ್ಯಕರ್ತೆಯನ್ನು ಸಾವಿರಕ್ಕೆ ಒಬ್ಬರಂತೆ ನೇಮಕ ಮಾಡಲಾಗಿದೆ. ಇದು ಮಲೆನಾಡು ಪ್ರದೇಶದಲ್ಲಿ ಸಾಧ್ಯವಾಗೋದಿಲ್ಲ. ಬಡವರು ಆಸ್ವತ್ರೆ ಬರಲು ವಾಹನಗಳ ಸೌಲಭ್ಯವಿಲ್ಲ. ಈಗಾಗಲೇ ಸರ್ಕಾರಿ ಬಸ್ಗಳು ಸರಿಯಾಗಿ ಸಂಚಾರ ಆರಂಭ ಮಾಡಿಲ್ಲ.
ಹೆಣ್ಣು ಮಕ್ಕಳಿಗೆ ಮನೆಗೆ ರೇಷನ್ ನೀಡುವ ಯೋಜನೆ ಸರಿಯಾಗಿ ಆಗಬೇಕು. ಹೆಚ್ಚಿನ ಆಶಾ ಕಾರ್ಯಕರ್ತೆಯರನ್ನು ಮಲೆನಾಡು ಭಾಗಕ್ಕೆ ನೇಮಕ ಮಾಡಬೇಕು. ಮಾತೃವಂದನಾ ಹಾಗೂ ಮಾತೃಪೂರ್ಣ ಯೋಜನೆ ಸರ್ಕಾರ ಒಂದು ಮಗುವಿಗೆ ಮಾತ್ರ ಅನ್ವಯ ಆಗುವಂತೆ ಮಾಡಿದೆ ಇದು ಸರಿಯಲ್ಲ. ಬಡವರು ಹಾಗೂ ಕಾಡಂಚಿನ ಪ್ರದೇಶದಲ್ಲಿ ವಾಸಿಸುವ ಜನರಿಗೆ ಇರಲೂ ಸರಿಯಾಗಿ ಮನೆ ಇಲ್ಲ. ಹೋಗಲು ಸರಿಯಾದ ರಸ್ತೆ ಇಲ್ಲ. ಗುಡಿಸಿಲಿನಲ್ಲಿ ವಾಸ ಮಾಡುತ್ತಿದ್ದಾರೆ. ಪ್ರಮುಖವಾಗಿ ಕೊಪ್ಪ ತಾಲೂಕಿನಲ್ಲಿ ಈ ರೀತಿಯ ಹತ್ತಾರು ಹಳ್ಳಿಗಳಿದ್ದು, ಹೆಗ್ಗಾರು ಕೂಡಿಗೆ, ಕಿಗ್ಗಾ, ಮೆಣಸಿನ ಹಾಡ್ಯ, ಕೆರೆ ಕಟ್ಟೆ ಈ ರೀತಿಯಾಗಿ ಹತ್ತಾರು ಹಳ್ಳಿಗಳ ಜನರು ಆಸ್ವತ್ರೆ ನೋಡೋದೆ ಕಷ್ಟಕರವಾಗಿದ್ದು ಇಂತಹ ಭಾಗಕ್ಕೆ ಹೆಚ್ಚಿನ ಸೌಲಭ್ಯ ಸಿಗಬೇಕಿದೆ.
ಒಟ್ಟಾರೆಯಾಗಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಾತೃತ್ವ ಸೌಲಭ್ಯದಿಂದ ಹತ್ತಾರು ಹಳ್ಳಿಗಳು ವಂಚಿತವಾಗಿದೆ. ಸಾಕಷ್ಟು ಆರೋಗ್ಯ ಸಮಸ್ಯೆಗಳು ಪ್ರತಿನಿತ್ಯ ನಾವು ಕಾಣುತ್ತಿದ್ದೇವೆ. ಈ ಬಗ್ಗೆ ಜನಪ್ರತಿನಿಧಿಗಳು ಹಾಗೂ ಸರ್ಕಾರ ಗಂಭೀರವಾಗಿ ಯೋಚನೆ ಮಾಡಿ ಎಲ್ಲಾ ಯೋಜನೆಗಳು ಜನರಿಗೆ ಮುಟ್ಟುವಂತೆ ಮಾಡಿದರೇ ಬಡವರಿಗೆ ಅನುಕೂಲವಾಗಲಿದೆ.