ಚಿಕ್ಕಮಗಳೂರು : ಚಿಕ್ಕಮಗಳೂರು ತಾಲೂಕಿನ ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದ ಧರ್ಮಗುರು ಗೌಸ್ ಮೋಹಿನುದ್ದೀನ್ ಶಾಖಾದ್ರಿ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿದ್ದ ಅರ್ಜಿಯನ್ನು ಚಿಕ್ಕಮಗಳೂರು ಸೆಷನ್ ನ್ಯಾಯಾಲಯ ವಜಾಗೊಳಿಸಿದೆ.
ಅಕ್ಟೋಬರ್ 27ರಂದು ಶಾಖಾದ್ರಿ ಮನೆಯಲ್ಲಿ ಚಿರತೆ ಹಾಗೂ ಜಿಂಕೆ ಚರ್ಮ ಪತ್ತೆಯಾಗುತ್ತಿದ್ದಂತೆ ಅರಣ್ಯಾಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಶಾಖಾದ್ರಿ ವಿಚಾರಣೆಗೆ ಹಾಜರಾಗದೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಇದೀಗ, ನ್ಯಾಯಾಲಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾ ಮಾಡಿದೆ.
ಬಳಿಕ ಕಾರ್ಯಾಚರಣೆ ವೇಳೆ ಸಿಕ್ಕ ಚಿರತೆ ಮತ್ತು ಜಿಂಕೆ ಚರ್ಮದ ಬಗ್ಗೆ ಸೂಕ್ತ ದಾಖಲೆಗಳ ಜೊತೆ ನವೆಂಬರ್ 2ನೇ ತಾರೀಖು ವಿಚಾರಣೆಗೆ ಹಾಜರಾಗುವಂತೆ ಶಾಖಾದ್ರಿ ಮನೆ ಬಾಗಿಲಿಗೆ ಅರಣ್ಯ ಇಲಾಖೆ ಅಧಿಕಾರಿಗಳು ನೋಟಿಸ್ ಅಂಟಿಸಿದ್ದರು. ಆದರೆ, ಶಾಖಾದ್ರಿ ವಿಚಾರಣೆಗೆ ಹಾಜರಾಗಿಲ್ಲ. ಶಾಖಾದ್ರಿ ಮನೆ ತಪಾಸಣೆ ಮಾಡುವ ವೇಳೆಯೂ ಮನೆಯ ಬಾಗಿಲು ಲಾಕ್ ಆಗಿದ್ದ ಕಾರಣ 10 ಗಂಟೆಗೂ ಅಧಿಕ ಕಾಲ ಕಾದು ಕುಳಿತ ಅಧಿಕಾರಿಗಳು ಸಂಬಂಧಿಕರೊಬ್ಬರ ಮೂಲಕ ಬೆಂಗಳೂರಿನಿಂದ ಬಂದ ಬಸ್ನಲ್ಲಿ ಕೀ ತರಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದರು.
ಮತ್ತೊಂದೆಡೆ ಜಿಲ್ಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಇಬ್ಬರು ಅರ್ಚಕರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಜೊತೆಗೆ ರಾಜ್ಯದೆಲ್ಲೆಡೆ ಸೆಲೆಬ್ರಿಟಿಗಳು, ರಾಜಕೀಯ ನಾಯಕರು ಮತ್ತು ಸ್ವಾಮೀಜಿಗಳು ಪೆಂಡೆಂಟ್ ಧರಿಸಿರುವ ಫೋಟೊಗಳು ವೈರಲ್ ಆಗಿದ್ದು, ಇಲಾಖೆ ಕ್ರಮ ಕೈಗೊಂಡಿದೆ.
ವರ್ತೂರ್ ಸಂತೋಷ್ಗೆ ಷರತ್ತುಬದ್ಧ ಜಾಮೀನು : ಹುಲಿ ಉಗುರು ಪೆಂಡೆಂಟ್ ಧರಿಸಿದ್ದ ಪ್ರಕರಣದಲ್ಲಿ ಕನ್ನಡ ಬಿಗ್ಬಾಸ್ ರಿಯಾಲಿಟಿ ಶೋ ಸ್ಪರ್ಧಿ ವರ್ತೂರ್ ಸಂತೋಷ್ ಬಂಧನ ಆಗುತ್ತಿದ್ದಂತೆ ಹಲವು ಪ್ರಕರಣಗಳು ಬೆಳಕಿಗೆ ಬಂದಿದ್ದವು. ಸಂತೋಷ್ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಬಂಧನ ಆಗುತ್ತಿದ್ದಂತೆ ಸಂತೋಷ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ನಂತರ ನ್ಯಾಯಾಲಯವು ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ನಾಲ್ಕು ಸಾವಿರ ನಗದು ಭದ್ರತೆ ಹಾಗೂ ಒಬ್ಬರ ಶ್ಯೂರಿಟಿ ಒದಗಿಸುವಂತೆ ತಿಳಿಸಿ, ನಗರದ 2ನೇ ಎಸಿಜೆಎಂ ನ್ಯಾಯಾಲಯವು ಜಾಮೀನು ನೀಡಿತ್ತು. ಸಂತೋಷ್ ಪರ ವಕೀಲ ನಟರಾಜ್ ಹಾಗೂ ಸರ್ಕಾರಿ ಅಭಿಯೋಜಕರು ನ್ಯಾಯಾಲಯದ ಮುಂದೆ ವಾದ ಮಂಡಿಸಿದ್ದರು.
ಇದನ್ನೂ ಓದಿ : ಚಿಕ್ಕಮಗಳೂರು: ಶಾಖಾದ್ರಿ ಮನೆಯಲ್ಲಿ ಚಿರತೆ, ಜಿಂಕೆ ಚರ್ಮ ವಶಕ್ಕೆ ಪಡೆದ ಅರಣ್ಯಾಧಿಕಾರಿಗಳು