ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕಳಕೋಡು ಹಾಗೂ ಈಚಲು ಹೊಳೆ ಗ್ರಾಮಗಳಿಗೆ 50 ವರ್ಷದ ನಂತರ ರಸ್ತೆ ಮಾರ್ಗ ಕಲ್ಪಿಸಿರುವುದು ಗ್ರಾಮಸ್ಥರ ಸಂತಸಕ್ಕೆ ಕಾರಣವಾಗಿದೆ. ಈ ಹಿಂದೆ ಕಳಕೋಡು ಮತ್ತು ಈಚಲು ಹೊಳೆ ಗ್ರಾಮಗಳಿಗೆ ಹೋಗಲು ರಸ್ತೆ ಮಾರ್ಗವೇ ಇರಲಿಲ್ಲ. ಹೀಗಾಗಿ ಸಾಕಷ್ಟು ರೀತಿಯಲ್ಲಿ ನಿತ್ಯ ಜನರು ಪರದಾಟ ನಡೆಸಲೇ ಬೇಕಾಗಿತ್ತು.
ಇದೀಗಾ ಈ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸಲುವಾಗಿ ಸಿಮೆಂಟ್ ರಸ್ತೆ ನಿರ್ಮಾಣವಾಗಿದೆ. ಸುಮಾರು 20 ಕ್ಕೂ ಹೆಚ್ಚು ಮನೆಯಿರೋ ಈ ಗ್ರಾಮಕ್ಕೆ ಕೆಲ ದೂರವಂತೂ ಕಾಲ್ನಡಿಗೆಯಲ್ಲಿ ಅದು ಕಾಲುದಾರಿಯಲ್ಲಿಯೇ ಹೋಗ ಬೇಕಿತ್ತು. ಅನಾರೋಗ್ಯಕ್ಕೆ ತುತ್ತಾದವರನ್ನು ಜೋಳಿಗೆ ಹಿಡಿದು ಕರೆದುಕೊಂಡು ಹೋಗೋ ಸ್ಥಿತಿಯಿತ್ತು. ಕಳೆದ ಮೂರು ತಿಂಗಳಿಂದ ಮಾಧ್ಯಮಗಳು ಈ ಕುಗ್ರಾಮದ, ರಸ್ತೆಯ ಸ್ಥಿತಿ ಗತಿ ಬಗ್ಗೆ ಸುದ್ದಿ ಬಿತ್ತರಿಸಿತ್ತು.
ಅಂದು ಸರ್ಕಾರ, ಜನ ಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತಕ್ಕೆ ಪ್ರಶ್ನೆ ಮಾಡಿ ಈ ಸಮಸ್ಯೆ ಬಗ್ಗೆ ತಿಳಿಸಿ ಕೊಟ್ಟಿತ್ತು. ನಿರಂತರ ವರದಿಯ ಫಲವಾಗಿ ಕೂಡಲೇ ಎಚ್ಚೆತ್ತು ಕೊಂಡ ಸರ್ಕಾರ, ಮೂಡಿಗೆರೆ ಶಾಸಕರು ಕಳಕೋಡು ಹಾಗೂ ಈಚಲು ಹೊಳೆ ಗ್ರಾಮಕ್ಕೆ ಸಿಮೆಂಟ್ ರಸ್ತೆ ಹಾಗೂ ಮಣ್ಣಿನ ರಸ್ತೆ ಮಾಡೋಕೆ ಮುಂದಾಗಿತ್ತು. ಈಗಾಗಲೇ ರಸ್ತೆ ಕಾಮಗಾರಿ ಸಂಪೂರ್ಣ ಮುಗಿದಿದೆ. ಆದರೆ ಎರಡು ದಿನಗಳಲ್ಲಿ ಆಗುವ ಸ್ವಲ್ಪ ಕಾಮಗಾರಿ ಇನ್ನೂ ಬಾಕಿ ಇದೆ.
ಈ ಹಿಂದೆ ಹಲವು ವರ್ಷದಿಂದ ಹಣವಿದೇ ಮಾಡುತ್ತೇವೆ ಎಂದು ಭರವಸೆಯಲ್ಲಿ ವರ್ಷಗಳು ಕಳೆದು ಹೋಗಿದ್ದವು. ರಾತ್ರಿಯಾಗಲಿ, ಬೆಳಗ್ಗೆಯಾಗಲಿ ವಯಸ್ಸಾದವರನ್ನು ದಿನಕ್ಕೆ ಎರಡು ಎರಡು ಭಾರಿ ಆಸ್ಪತ್ರೆಗೆ ಕರೆದು ಕೊಂಡು ಹೋಗಿರುವುದು ಸಹಾ ನಡೆದಿತ್ತು. ಸದ್ಯಕ್ಕೆ ರಸ್ತೆ ಪೂರ್ಣಗೊಂಡಿರುವುದು ಖುಷಿ ಜನರಿಗೆ ವಿಚಾರವಾಗಿದೆ.
ಇದೇ ವೇಳೆ ಗ್ರಾಮಸ್ಥರಾದ ರಮೇಶ್ ಎಂಬುವವರು ಮಾತನಾಡಿ, ಈವರೆಗೆ ರಸ್ತೆ ವ್ಯವಸ್ಥೆ ಇರಲಿಲ್ಲಿ. ನೂತನ ಸರ್ಕಾರ ಬಂದ ಮೇಲೆ ಶಾಸಕಿ ನಯನ ಮೋಟಮ್ಮ ಅವರಿಗೆ ಮನವಿ ಮಾಡಿದರಿಂದ ರಸ್ತೆ ಆಗಿದೆ. ಶಾಸಕರಿಗೆ ಮತ್ತು ಮಾಧ್ಯಮಗಳಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಇನ್ನು ಮುಂದೆ ಜೋಳಿಗೆ ಕಟ್ಟಿಕೊಂಡು ಹೋಗುವ ಪರಿಸ್ಥಿತಿ ಬರುವುದಿಲ್ಲ ಎಂದು ಹೇಳಿದರು.
ಮಳೆಗಾಲದಲ್ಲಿ ವಯಸ್ಸಾದವರನ್ನು ಜೋಳಿಗೆಯಲ್ಲಿ ಕಟ್ಟಿಕೊಂಡು ಹೋಗುವುದನ್ನು ನೋಡಿ ಬೇಸರವಾಗಿತ್ತು. ಬಳಿಕ ಶಾಸಕರ ಗಮನಕ್ಕೆ ತಂದ ನಂತರ ರಸ್ತೆಯಾಗಿದೆ. ಈ ಹಿಂದೆ ಬಂದಂತಹ ಯಾವ ಸರ್ಕಾರಗಳು ರಸ್ತೆ ನಿರ್ಮಾಣ ಮಾಡಿರಲಿಲ್ಲ. ಹೀಗಾಗಿ ರಸ್ತೆ ಇಲ್ಲದೇ ಆಚೆ ಕಡೆ ಇಲ್ಲಿನ ಜನರು ಹೋಗಿರಲಿಲ್ಲ. ಇದೀಗ ಜನರಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ ಎಂದು ಮತ್ತೋರ್ವ ಗ್ರಾಮಸ್ಥ ಶ್ರೇಣಿಕ್ ಜೈನ್ ಎಂಬುವವರು ತಿಳಿಸಿದರು.
ಇದನ್ನೂ ಓದಿ : ಗೊಲ್ಲರ ಮಕ್ಕಳ ಶೂಗಳಿಂದ ಮೈಲಿಗೆ ಆರೋಪ: ಕ್ಷೇತ್ರ ಶಿಕ್ಷಣಾಧಿಕಾರಿ ಹೇಳಿದ್ದೇನು?