ಚಿಕ್ಕಮಗಳೂರು: ಜಿಲ್ಲಾಧಿಕಾರಿಗಳ ನಡೆ, ಹಳ್ಳಿಯ ಕಡೆ ಕಾರ್ಯಕ್ರಮದ ಹಿನ್ನೆಲೆ ರಾಜ್ಯದ ಕಂದಾಯ ಸಚಿವ ಆರ್.ಅಶೋಕ್ ಅವರು ಶನಿವಾರ ರಾತ್ರಿ ಕಡೂರು ತಾಲೂಕಿನ ಹುಲಿಕೆರೆಯಲ್ಲಿ ಗ್ರಾಮ ವಾಸ್ತವ್ಯ ಕೈಗೊಂಡರು. ಚಿಕ್ಕಮಗಳೂರಿಗೆ ಬೆಳಗ್ಗೆ ಆಗಮಿಸಿದ ಕಂದಾಯ ಸಚಿವರು, ತಾಲೂಕಿನ ವಸ್ತಾರೆ ಗ್ರಾಮದಲ್ಲಿ ಅಂಬಳೆ ಹಾಗೂ ವಸ್ತಾರೆ ನಾಡ ಕಚೇರಿಗಳನ್ನು ಉದ್ಘಾಟಿಸಿದರು. ದಂಟರಮಕ್ಕಿಯಲ್ಲಿ ಸುಮಾರು 70 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಜಿಲ್ಲಾ ಸಂಕೀರ್ಣ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
ನಂತರ ಕಾಫಿ ಬೆಳೆಗಾರರು ಒತ್ತುವರಿ ಮಾಡಿರುವ ಸರ್ಕಾರಿ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ನೀಡಲು ಬೆಳಗಾವಿ ಅಧಿವೇಶನದಲ್ಲಿ ಸರ್ಕಾರ ತೀರ್ಮಾನ ಕೈಗೊಂಡಿರುವ ಹಿನ್ನೆಲೆ ಸಚಿವ ಆರ್.ಅಶೋಕ್ ಅವರಿಗೆ ಕಾಫಿ ಬೆಳೆಗಾರರ ಒಕ್ಕೂಟ ಹಾಗೂ ಬಿಜೆಪಿ ರೈತ ಮೋರ್ಚಾದಿಂದ ನಗರದ ಎಐಟಿ ಕಾಲೇಜು ಮೈದಾನದಲ್ಲಿ ಅಭಿನಂದನಾ ಸಮಾರಂಭ ನಡೆಯಿತು.
ಬಳಿಕ ಸಂಜೆ 4 ಗಂಟೆಗೆ ಸಚಿವರು ಕಡೂರು ತಾಲೂಕಿನ ಹುಲಿಕೆರೆ ಗ್ರಾಮಕ್ಕೆ ತೆರಳಿದರು. ಗ್ರಾಮಕ್ಕೆ ಆಗಮಿಸಿದ ಸಚಿವರು ಹಾಗೂ ಶಾಸಕರನ್ನು ಕಲಾ ತಂಡಗಳೊಂದಿಗೆ ಪೂರ್ಣಕುಂಭ ಸಹಿತ ಭವ್ಯ ಸ್ವಾಗತ ಕೋರಲಾಯಿತು. ಇಲ್ಲಿನ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಸಂಜೆ 5 ಗಂಟೆಗೆ ಸರ್ಕಾರಿ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
8 ತಾಂಡಾಗಳು ಕಂದಾಯ ಗ್ರಾಮ:ಗ್ರಾಮವಾಸ್ತವ್ಯದಲ್ಲಿ ಚಿಕ್ಕಮಗಳೂರು ಜಿಲ್ಲೆಯ 8 ತಾಂಡಾಗಳನ್ನು ಕಂದಾಯ ಗ್ರಾಮವನ್ನಾಗಿ ಸಚಿವರು ಘೋಷಣೆ ಮಾಡಲಿದ್ದಾರೆ. ಸಖರಾಯಪಟ್ಟಣ ಹೋಬಳಿಯಲ್ಲಿ ಜೋಡಿ ಲಿಂಗದಹಳ್ಳಿ ತಾಂಡಾವನ್ನು ಸೇವಾಲಾಲ್ ನಗರ, ಎಸ್.ಬಿದರೆ ಬಳಿ ಇರುವ ತಾಂಡಾವನ್ನು ಕೃಷ್ಣಾಪುರ ಗ್ರಾಮವನ್ನಾಗಿ ಘೋಷಣೆ ಮಾಡಿ, 59 ಮನೆಗಳಿಗೆ ಹಕ್ಕು ಪತ್ರ ವಿತರಿಸುವರು.
ಹುಲಿಕೆರೆ ಸರ್ಕಾರಿ ಶಾಲೆಯಲ್ಲಿ ಸಚಿವರು ವಾಸ್ತವ್ಯ: ಇದೇ ಸಂದರ್ಭದಲ್ಲಿ ವೃದ್ಧಾಪ್ಯ, ವಿಧವಾ ಹಾಗೂ ಅಂಗವಿಕಲ ವೇತನ ಸೇರಿದಂತೆ ಸರ್ಕಾರಿ ಸವಲತ್ತು ವಿತರಿಸಲಿದ್ದಾರೆ. ಸಮಾರಂಭದ ಬಳಿಕ ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಶನಿವಾರ ರಾತ್ರಿ ಹುಲಿಕೆರೆ ಸರ್ಕಾರಿ ಶಾಲೆಯಲ್ಲಿ ಸಚಿವರು ವಾಸ್ತವ್ಯ ಹೂಡಲಿದ್ದಾರೆ. ಮರು ದಿನ ಬೆಳಗ್ಗೆ ದಲಿತರ ಮನೆಯಲ್ಲಿ ತಿಂಡಿ ಉಪಹಾರ ತಿಂದು ಸಾರ್ವಜನಿಕರ ಆಹವಾಲು ಸ್ವೀಕರಿಸಿ, ನಂತರ ಬೆಂಗಳೂರಿಗೆ ತೆರಳಲಿದ್ದಾರೆ.
ಬೆಳಗ್ಗೆ ಬನ್ನಿ ರಾಜಕೀಯ ಮಾತಾಡ್ತೀನಿ: ಸುದ್ದಿಗಾರರೊಂದಿಗೆ ಕಂದಾಯ ಸಚಿವ ಆರ್ ಅಶೋಕ್ ಅವರು ಮಾತನಾಡಿ, ಗ್ರಾಮ ವಾಸ್ತವ್ಯದ ಉದ್ದೇಶವೇ ಕಾಫಿ ಬೆಳೆಗಾರರ ಸಮಸ್ಯೆ ಬಗೆಹರಿಸುವುದು. ನಾನು ಸರ್ಕಾರಿ ಕಾರ್ಯಕ್ರಮಕ್ಕೆ ಬಂದಿದ್ದೇನೆ ರಾಜಕೀಯ ಮಾತನಾಡಲ್ಲ. ಇದು ಸರ್ಕಾರಿ ಕಾರ್ಯಕ್ರಮ, ರಾಜಕೀಯ ಮಾತನಾಡಲ್ಲ. ಮುಗಿದ ನಂತರ ಮಾತನಾಡುತ್ತೇನೆ ಎಂದು ತಿಳಿಸಿದರು.
ನಾಳೆ ಬೆಳಗ್ಗೆ 10 ಗಂಟೆಗೆ ಬನ್ನಿ, ಎಲ್ಲ ರಾಜಕೀಯ ಹೇಳುತ್ತೇನೆ. ನಿಮ್ಮ 100 ಪ್ರಶ್ನೆಗೆ 200 ಉತ್ತರವನ್ನ ಕೊಟ್ಟೆ ಇಲ್ಲಿಂದ ಹೋಗ್ತೀನಿ. ಯಾರ್ಯಾರು 57ರ ಅರ್ಜಿಯಲ್ಲಿ ರೈತರಿಗೆ ಮೋಸ ಮಾಡಿದ್ದಾರೆ. ಸೂಕ್ತ ದಾಖಲೆ ಕೊಟ್ರೆ ಅಧಿಕಾರಿಗಳನ್ನೂ ಜೈಲಿಗೆ ಹಾಕ್ತೀನಿ ಎಂದು ಚಿಕ್ಕಮಗಳೂರಿನಲ್ಲಿ ಕಂದಾಯ ಸಚಿವ ಆರ್.ಅಶೋಕ್ ಗುಡುಗಿದರು.
ಇದನ್ನೂಓದಿ:ಮುತಾಲಿಕ್ ನಿರ್ಧಾರ ನಾನ್ಯಾಕೆ ಪ್ರಶ್ನಿಸಲಿ, ಕ್ಷೇತ್ರದ ಜನತೆಯೇ ಎಲ್ಲವನ್ನೂ ತೀರ್ಮಾನಿಸಲಿದ್ದಾರೆ: ಸುನೀಲ್ ಕುಮಾರ್ ತಿರುಗೇಟು