ಚಿಕ್ಕಮಗಳೂರು: ವಿದೇಶದಲ್ಲಿ ಉದ್ಯೋಗದ ಆಸೆಗೆ ಬಿದ್ದು ಕಾಂಬೋಡಿಯಾ ದೇಶಕ್ಕೆ ತೆರಳಿ ಬಂಧಿಯಾಗಿದ್ದ ಎನ್ಆರ್ ಪುರ ತಾಲೂಕಿನ ಬಾಳೆ ಹೊನ್ನೂರಿನ ಮಹಲ್ಗೋಡು ಗ್ರಾಮದ ಯುವಕನನ್ನು ರಕ್ಷಿಸಲಾಗಿದ್ದು, ಭಾರತಕ್ಕೆ ವಾಪಸ್ ಕರೆತರುವ ಪ್ರಕ್ರಿಯೆ ಆರಂಭವಾಗಿದೆ. ಕೆಲವು ದಿನಗಳ ಹಿಂದೆ ಯುವಕ ಅಶೋಕ್ನ ಪೋಷಕರು ತಮ್ಮ ಮಗನನ್ನು ಮರಳಿ ಭಾರತಕ್ಕೆ ವಾಪಸ್ ಕರೆತರುವಂತೆ ಜಿಲ್ಲಾಡಳಿತ, ಸ್ಥಳೀಯ ಶಾಸಕರಲ್ಲಿ ಮತ್ತು ಸಂಸದೆ ಶೋಭಾ ಕರಂದ್ಲಾಜೆ ಅವರಲ್ಲಿ ಮನವಿ ಮಾಡಿದ್ದರು.
ಇದಕ್ಕೆ ಸ್ಪಂದಿಸಿದ ಚಿಕ್ಕಮಗಳೂರು ಮತ್ತು ಉಡುಪಿ ಸಂಸದೆ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಎನ್ಆರ್ಐ ಆರತಿ ಕೃಷ್ಣ ಅವರು ಅಶೋಕ್ ನನ್ನ ರಕ್ಷಣೆ ಮಾಡುವಂತೆ ಕಾಂಬೋಡಿಯಾ ದೇಶದ ಭಾರತೀಯ ರಾಯಭಾರಿ ಕಚೇರಿಗೆ ಪತ್ರ ವ್ಯವಹಾರ ನಡೆಸುವ ಮೂಲಕ ಮನವಿ ಮಾಡಿದ್ದರು. ಅದರಂತೆ ಭಾರತೀಯ ರಾಯಭಾರಿಯ ಕಚೇರಿ ಸಿಬ್ಬಂದಿ, ಕಾಂಬೋಡಿಯಾ ಅಧಿಕಾರಿಗಳ ಜೊತೆ ಮಾತನಾಡಿ ಅಶೋಕ್ ರಕ್ಷಣೆ ಮಾಡಿ ಕಚೇರಿಗೆ ಕರೆತದಿದ್ದು, ಎರಡ್ಮೂರು ದಿನಗಳಲ್ಲಿ ಅಶೋಕ್ ಭಾರತಕ್ಕೆ ವಾಪಸ್ ಆಗಲಿದ್ದಾರೆ ಎಂದು ತಿಳಿದು ಬಂದಿದೆ.
ಏನಿದು ಪ್ರಕರಣ?: ಖಾಸಗಿ ಏಜೆನ್ಸಿವೊಂದರಿಂದ ಕ್ರೌನ್ ಕೆಸಿನೋ ಎಂಬ ಕಂಪೆನಿಯಲ್ಲಿ ಕೆಲಸಕ್ಕೆ ನೀವು ಆಯ್ಕೆಯಾಗಿದ್ದೀರಾ. ತಕ್ಷಣವೇ ನೀವು ಕಾಂಬೋಡಿಯಾಗೆ ಬರಬೇಕು, ತಿಂಗಳಿಗೆ 800 ಡಾಲರ್ ಸಂಬಳ ಎಂಬ ಆಫರ್ ಲೆಟರ್ ಒಂದು ಕಳೆದ ಮೂರು ತಿಂಗಳ ಹಿಂದೆ ಅಶೋಕ್ ಕೈ ಸೇರಿತ್ತು. ಇದನ್ನು ನಂಬಿ ಅಲ್ಲಿಗೆ ಹೋದ ಅಶೋಕ್ಗೆ ತಾನು ಮೋಸದ ಜಾಲಕ್ಕೆ ಸಿಲುಕಿರುವ ಅರಿವಾಗಿತ್ತು. ಅಲ್ಲಿ ಆತನಿಗೆ ಬೇರೆ ಕೆಲಸ ಮಾಡಿಸುತ್ತ ಚಿತ್ರ ಹಿಂಸೆ ನೀಡಲಾಗುತ್ತಿತ್ತು. ಹೇಗಾದರೂ ಮಾಡಿ ನನ್ನನ್ನು ಭಾರತಕ್ಕೆ ವಾಪಸ್ ಕರೆಸಿಕೊಳ್ಳಿ ಎಂದು ಅಶೋಕ್ ತನ್ನ ಕುಟುಂಬ ಸದಸ್ಯರ ಬಳಿ ಅಂಗಲಾಚಿದ್ದ.
ಈ ಕುರಿತು ಅಶೋಕನ ತಂದೆ ಸುರೇಶ್ ಮಾತನಾಡಿ, "ನನ್ನ ಮಗನನ್ನು ಹೇಗಾದರೂ ಮಾಡಿ ನಮಗೆ ಒಪ್ಪಿಸಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ನನ್ನ ಮಗನನ್ನು ಮರಳಿ ಭಾರತಕ್ಕೆ ಕಳುಹಿಸಲು 13 ಲಕ್ಷ ರೂ, ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ನಮ್ಮ ಬಳಿ ಅಷ್ಟು ಹಣ ಇಲ್ಲ. ನಿತ್ಯ ನನ್ನ ಮಗನಿಗೆ ಚಿತ್ರಹಿಂಸೆ ನೀಡುತ್ತಿದ್ದಾರೆ. ಇನ್ನೆರಡು ದಿನಗಳಲ್ಲಿ ಹಣ ನೀಡದಿದ್ದರೆ ನನ್ನ ಮಗನನ್ನು ಸಾಯಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಸರ್ಕಾರ ಮತ್ತು ಗೃಹ ಸಚಿವ ಡಾ ಜಿ ಪರಮೇಶ್ವರ್ ಈ ಸಂಬಂಧ ಕ್ರಮ ಕೈಗೊಂಡು ನನ್ನ ಮಗನನ್ನು ಭಾರತಕ್ಕೆ ವಾಪಸ್ ಕರೆಸಬೇಕು" ಎಂದು ಮನವಿ ಮಾಡಿದ್ದರು.
ಇದನ್ನೂ ಓದಿ: ದತ್ತಮಾಲಾ ಅಭಿಯಾನ: ಚಿಕ್ಕಮಗಳೂರಲ್ಲಿ ಮಾಲಾಧಾರಿಗಳಿಂದ ಭಿಕ್ಷಾಟನೆ, ಬಿಗಿ ಪೊಲೀಸ್ ಭದ್ರತೆ